ಮೈಸೂರು; ವರುಣ ಕ್ಷೇತ್ರ ವ್ಯಾಪ್ತಿಯ ಕೀಳನಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಕುರಿತು ಕೊನೆಗೂ ಮುಖ್ಯಮಂತ್ರಿ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಮೌನ ಮುರಿದಿದ್ದಾರೆ.
ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜತೆಗೆ ಮಾತನಾಡುತ್ತೇನೆ. ಈಗ ನಾನು ದುಡ್ಡಿನ ಬಗ್ಗೆ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ಆದರೂ, ಈಗ ಅದರ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ನಾನು ಅವತ್ತು ಮಾತನಾಡಿರುವುದು ಸಿಎಸ್‌ಆರ್ ಅನುದಾನದ ವಿಚಾರವಾಗಿದೆ ಎಂದು ಸ್ಪಷ್ಟನೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾತನಾಡುವಾಗ ಲಿಸ್ಟ್ ಎಂದ ಕೂಡಲೇ ಅದನ್ನು ವರ್ಗಾವಣೆ ಎಂದು ಏಕೆ ತೆಗೆದುಕೊಂಡು ಹೋಗುತ್ತಾರೆ. ಅವರ ಅವಧಿಯಲ್ಲಿ ಲಿಸ್ಟ್ ಅಂದರೆ ವರ್ಗಾವಣೆಯೇ? ಅದು ದಂಧೆಯಾಗಿತ್ತಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಅವರ ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದೆಯೇ? ಹಾಗಾದರೆ, ಅವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರೆಯೇ? ನನಗೆ ವರುಣ ಕ್ಷೇತ್ರದ ಜವಾಬ್ದಾರಿ ಇದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರೂ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಎಲ್ಲ ವರ್ಗಾವಣೆಯನ್ನೂ ಅವರು ಹಣದ ದೃಷ್ಟಿಯಲ್ಲಿ ನೋಡಿದರೆ, ಅವರು ಅದೇ ಕೆಲಸ ಮಾಡುತ್ತಿದ್ದರು ಎಂಬ ಅರ್ಥ ಅಲ್ವೇ? ಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ಇಲ್ಲದೆ ಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದು, ಅನಗತ್ಯವಾಗಿ ಎಲ್ಲ ವಿಚಾರವಾಗಿ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ಎಚ್‌ಡಿಕೆಗೆ ತಿರುಗೇಟುಕೊಟ್ಟರು.
ಈ ರೀತಿ ಆರೋಪ ಮಾಡುವುದು ನೀಚ ರಾಜಕಾರಣ. ತಂದೆಯ ವಿಚಾರದಲ್ಲಿ ಕುಮಾರಸ್ವಾಮಿ ಏನು ಆರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ಕುಟುಂಬದವರನ್ನು ಬಳಸಿಕೊಂಡು ಸಿಎಂ ಅವರನ್ನು ಅಣಿಯುವ ಪ್ರಯತ್ನವನ್ನು ಇವರು ಮೊದಲಿನಿಂದಲೂ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ವರ್ಗಾವಣೆ ಎಲ್ಲಿಗೆ ಆಗಿದೆ? ಆ ಕ್ಷೇತ್ರದ ವ್ಯಾಪ್ತಿ ಯಾವುದು. ಅದರ ಬಗ್ಗೆ ಕ್ಷೇತ್ರದ ಶಾಸಕರನ್ನು ಕೇಳಿಕೊಳ್ಳಿ. ಅದಕ್ಕೂ ನನಗೂ, ಏನೂ ಸಂಬಂಧ? ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ. ಇವತ್ತಿನ ವರ್ಗಾವಣೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.