ಕಾರವಾರ: ವಿಧಾನ ಪರಿಷತ್ ಶಾಸಕರ 2023-24 ನೇ ಸಾಲಿನ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಅವರು ಬುಧವಾರ ನಗರಸಭೆ ಆವರಣದಲ್ಲಿ ಒಟ್ಟು 9 ವಿಕಲಚೇತನರಿಗೆ 10 ಲಕ್ಷ ರೂ ಅನುದಾನದಲ್ಲಿ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ವಿತರಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ ಅವರು, ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಬೇಕು. ಉದ್ಯೋಗಕ್ಕಾಗಿ ಮತ್ತು ಮತ್ತಿತರ ವ್ಯವಸ್ಥೆಗಳಿಗೆ ಬೇರೆಯವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಆ ಕಾರಣಕ್ಕೆ ಅವರ ಬದುಕಿಗೆ ಚೈತನ್ಯ ನೀಡಲು ಮತ್ತು ಉಳಿದವರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಲು ಸರ್ಕಾರ ನೆರವು ನೀಡುತ್ತಿದೆ ಇವುಗಳ ಸದುಪಯೋಗ ಪಡೆಯಬೇಕು. ಕಳೆದ ವರ್ಷ ಕೂಡಾ 10 ಜನ ಫಲಾನುಭವಿಗಳಿಗೆ ವಾಹನ ವಿತರಣೆ ಮಾಡಲಾಗಿದ್ದು, ಮುಂದಿನ ವರ್ಷ ವಿಕಲಚೇತನ ಮಕ್ಕಳಿಗೆ ವಿದ್ಯಾಭ್ಯಾಸ ಸಲುವಾಗಿ ಲಾಪ್‌ಟಾಪ್ ಕಂಪ್ಯೂಟರ್ ವಿತರಣೆ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೆಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ವಿಕಲಚೇತನ ಕಲ್ಯಾಣಾಧಿಕಾರಿ ರಾಘವೇಂದ್ರ ಭಟ್ಟ, ನಗರಸಭೆ ಎಎಇ ಸದಾನಂದ ಮತ್ತಿತರರು ಇದ್ದರು.