ಜಿಲ್ಲೆ

ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಪ್ರಯತ್ನಿಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಸ್ವಂತ ಹಾಗೂ ಸಮಾಜದ ಒಳಿತಿಗಾಗಿ ನಮ್ಮ ಮುಂದಿರುವ ನೈಸರ್ಗಿಕ, ಮಾನವ ನಿರ್ಮಿತ, ಜಾಗತಿಕ ಮತ್ತು ಸ್ಥಳಿಯ ಸವಾಲುಗಳನ್ನು ನಮ್ಮ ವಿವೇಚನೆ ಹಾಗೂ ಕೌಶಲಗಳ ಪ್ರದರ್ಶನಕ್ಕಿರುವ ಸದಾವಕಾಶ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್​.ಅಯ್ಯಪ್ಪನ್​ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಗಾಂಧಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲಪೂರ್ಣತೆ, ನಾವೀನ್ಯತೆ ಮತ್ತು ಸೇವಾ ಮನೋಭಾವ ಇಂದಿನ ನಿರ್ಣಾಯಕ ಕಾಲ ಘಟ್ಟದ ಅವಶ್ಯಕತೆಗಳಾಗಿವೆ ಎನ್ನುವುದನ್ನು ಮರೆಯಬಾರದು. ಕಾಯವೇ ಕೈಲಾಸ ತತ್ವ ಪಾಲನೆ ಮೂಲಕ ನಿಮ್ಮ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಿ, ರಾಷ್ಟ್ರಪಿತ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕನಸನ್ನು ನನಸಾಗಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಜನರು ತಮ್ಮ ಕಷ್ಟದಲ್ಲೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅದರ ಫಲ ನೋಡುವ ಸುದಿನ ಇದಾಗಿದೆ. ವಿವಿಯಲ್ಲಿ ಗಳಿಸಿದ ಯಾವುದೇ ಕ್ಷೇತ್ರದ ತಾಂತ್ರಿಕ ಜ್ಞಾನವು ಯಶಸ್ವಿ ಉದ್ಯಮಿಗಳನ್ನಾಗಿಸಬಹುದು. ಹೀಗಾಗಿ ಪದವೀಧರರು ಕೆಲಸ ಹುಡುಕುವ ಬದಲು ಕೆಲಸ ನೀಡುವಂತಾಗಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿ, ಕರೊನಾ ನಂತರದಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಹೀಗಾಗಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಜಾರಿಗೆ ತರಲು ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳ ಜತೆಗೆ ಮಾತನಾಡಿದ್ದೇನೆ. ಮುಂದಿನ ವರ್ಷದಲ್ಲಿ ಸರಿಯಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದರು.
ಇನ್ನು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೌಶಲಯುತ ಶಿಕ್ಷಣಕ್ಕೆ ಆದ್ಯತೆ ನೀಡಿ, ಹೊಸ ಹೊಸ ಕೋರ್ಸ್​ಗಳನ್ನು ಆರಂಭಿಸಿದ್ದೇವೆ. ಈಗಾಗಲೇ 45 ಕಾಲೇಜುಗಳಲ್ಲಿ ಈ ಕೋರ್ಸ್​ಗಳು ಆರಂಭವಾಗಿವೆ. ಇದರಿಂದ ವಿದ್ಯಾರ್ಥಿಗಳು ಸರಳವಾಗಿ ಉದ್ಯೋಗ ಪಡೆಯುವಂತಾಗಲಿದೆ ಎಂದರು.
ಕುಲಪತಿ ಪ್ರೊ. ಕೆ.ಬಿ. ಗುಡಸಿ ಸ್ವಾಗತಿಸಿದರು. ಕುಲಸಚಿವರಾದ ಡಾ.ಎ.ಚನ್ನಪ್ಪ, ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಡಾ.ಸಿ.ಕೃಷ್ಣಮೂರ್ತಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಂಡಿಕೇಟ್​ ಸದಸ್ಯರು, ಇತರರು ಇದ್ದರು.
ಮೂವರಿಗೆ ಗೌಡಾ ಪ್ರದಾನ: ಆಂಧ್ರಪ್ರದೇಶದ ವಿಜಯವಾಡದ ಗೊಲ್ಲಪುಡಿ ಮೂಲದ, ರೈಲ್ವೆ ಇಲಾಖೆಯ ಯೋಜನೆಗಳನ್ನು ತ್ವರಿತವಾಗಿ ರ್ಪೂಣಗೊಳಿಸಿದ ಹುಬ್ಬಳ್ಳಿಯ ಡಾ.ವೆಂಕಟ ಸತ್ಯ ವರಪ್ರಸಾದ ಚಿಗುರುಪಾಟಿ (ವಿಎಸ್​ವಿ ಪ್ರಸಾದ), ಬಾಗಲಕೋಟೆ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದ ಶ್ರೀ ನಿರುಪಾಧೀಶ ಸ್ವಾಮೀಜಿ, ಆಕ್ಸಫರ್ಡ್​ ಸಮೂಹ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಶಿಕ್ಷಣ ತಜ್ಞ ಎಸ್​.ಎನ್​.ವೆಂಕಟಲಕ್ಷ್ಮೀ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು.

ಅಶಿಸ್ತು ಪ್ರದರ್ಶನ ನೋವಿನ ಸಂಗತಿಕರ್ನಾಟಕ ವಿಶ್ವ ವಿದ್ಯಾಲಯವನ್ನು 4 ವರ್ಷಗಳ ಕಾಲ ಉತ್ತಮವಾಗಿ ಮುನ್ನಡೆಸಿದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರ ವಿದಾಯದ ಘಟಿಕೋತ್ಸವ ಇದಾಗಿದೆ. ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗೌರವದಿಂದ ನಡೆದುಕೊಳ್ಳುವ ಬದಲು ಅಶಿಸ್ತು ಪ್ರದರ್ಶಿಸಿದ್ದು ನೋವಿನ ಸಂಗತಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪಡೆದ ಖುಷಿ ಇದೆ. ಆದರೆ ಅತಿಥಿಗಳ ಹಿತ ನುಡಿಗಳನ್ನು ಕೇಳುವ ವ್ಯವಧಾನ ಇಲ್ಲ ಎಂದು ಕಿಡಿಕಾರಿದರು.