ಕಿರುಗೂರು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಎಂ.ಲಕ್ಷ್ಮಣ್‌ಗೌಡ, ಚೆಪ್ಪುಡೀರ ಬೋಪಣ್ಣ ಇದ್ದರು.  
ಜಿಲ್ಲೆ

ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರಲು ಯತ್ನ

ನಾಗೇಶ ಎಸ್

ಗೋಣಿಕೊಪ್ಪ: ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಕಿರು ನಾಲ್ಕುನಾಡು, ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವಾಲಯಕ್ಕೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

ನಾಡ್‌ತಕ್ಕರಾದ ಚೆಪ್ಪುಡೀರ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಈ ವೇಳೆ ಪೂಜೆ ಸಲ್ಲಿಸಲಾಯಿತು. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧ ಕಾರ್ಯಗಳಿಗೆ ಇದೇ ವೇಳೆ ಶಾಸಕ ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಗ್ರಾಮದ ಅಭಿವೃದ್ಧಿಗೆ ಮೊದಲ ಹಂತದಲ್ಲಿ 30 ಲಕ್ಷ ರೂ.ಅನುದಾನ ನೀಡಲಾಗಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗು ವುದು. ಈಗಾಗಲೇ ಪುರಸಭೆ ಸೇರಿದಂತೆ 58 ಪಂಚಾಯಿತಿಗಳ ಅಭಿವೃದ್ಧಿಗೆ 260 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, ಎಲ್ಲ ಪಂಚಾಯಿಗಳಲ್ಲಿಯೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಮತ್ತೂರು ಭಾಗದ ಬೆಟ್ಟಕುರುಬ ಜನಾಂಗ ಹಕ್ಕುಪತ್ರದಿಂದ ವಂಚಿತರಾಗಿರುವ ಬಗ್ಗೆ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷ ಕೊರಕುಟ್ಟಿರ ಸರಚಂಗಪ್ಪ ಇದೇ ವೇಳೆ ಗಮನ ಸೆಳೆದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ಗೌಡ ಕಿರುಗೂರು ವಲಯ ಕಾಂಗ್ರೆಸ್ ಅಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ, ಕೊದೆಂಗಡ ವಿಠಲ, ಗ್ರಾಪಂ ಸದಸ್ಯರಾದ ಪಡಿಞರಂಡ ಗಿರೀಶ್, ಕಾಕೇರ ರವಿ, ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ಪ್ರಮುಖರಾದ ದಾಮೋದರ್, ಪುತ್ತಮನೆ ರಮೇಶ್,ಪಣಿಯರ ಮುತ್ತ, ಗಾಡಂಗಡ ಉತ್ತಯ್ಯ, ಕೊರಕುಟ್ಟಿರ ರಾಜಪ್ಪ, ಅರ್ಚಕ ಜನಾರ್ಧನ್ ಭಟ್ ಹಾಜರಿದ್ದರು.