ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಬ್ಬಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತ ವಿಚಾರ ಸಂಕಿರಣದಲ್ಲಿ ರೈತರನ್ನು ಸನ್ಮಾನಿಸಲಾಯಿತು. ಡಾ. ಶಿವಶಂಕರಮೂರ್ತಿ, ನಿಂಗನಗೌಡ ಪಾಟೀಲ, ಎಸ್.ಟಿ. ಪಾಟೀಲ, ಡಾ. ಪ್ರಸಾದ, ಡಾ. ವೀಣಾ ಚಂದಾವರಿ ಇದ್ದರು. 
ಜಿಲ್ಲೆ

100 ಟನ್ ಕಬ್ಬಿನ ಇಳುವರಿ ಪಡೆಯಲು ಪ್ರಯತ್ನಿಸಿ

ಇಂಡಿ: ತಾಲೂಕಿನಲ್ಲಿ ರೈತರು ಒಂದು ಎಕರೆ ಪ್ರದೇಶದಲ್ಲಿ ಕೇವಲ 30 ರಿಂದ 40 ಟನ್ ಕಬ್ಬು ಇಳುವರಿ ಮಾತ್ರ ಪಡೆಯುತ್ತಿದ್ದು, ಪ್ರತಿ ಎಕರೆಗೆ 100 ಟನ್ ಇಳುವರಿ ಪಡೆಯಲು ಪ್ರಯತ್ನಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಹೇಳಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಬ್ಬಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ಅತ್ಯಧಿಕ ಇಳುವರಿ ಮತ್ತು ಕಿಸಾನ್ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಬ್ಬು ಬೆಳೆಗೆ ಮಣ್ಣು ಪರೀಕ್ಷೆ ಮತ್ತು ಮಣ್ಣಿನಲ್ಲಿ ಸವಳು ಅಥವಾ ಪಿಎಚ್ ಪರೀಕ್ಷೆಗಳು ಮುಖ್ಯ. ಆ ಆಧಾರದ ಮೇಲೆ ಇಳುವರಿ ಹೆಚ್ಚು ಬರುವ ಹಾಗೆ ವ್ಯವಸ್ಥೆ ಮಾಡಬೇಕು. ಕಬ್ಬು ಗಾಳಿ ಮತ್ತು ಬೆಳಕು ಬಯಸುವ ಬೆಳೆ, ಹಾಗಿದ್ದರೆ ಮಾತ್ರ ಪ್ರತಿ ಕಬ್ಬಿನ ತೂಕವೂ ಹೆಚ್ಚು ಬರುತ್ತದೆ. ಗ್ಲುಕೋಸ್ ಮತ್ತು ಸಾರಜನಕ ಪೂರೈಸಿದರೆ ಮೊಳಕೆ ಬರುತ್ತದೆ. 30 ರಿಂದ 120 ದಿನಗಳವರೆಗೆ ಮರಿ ಒಡೆಯುವ ಹಂತ. ಆಗ ನೀರು ಕಡಿಮೆ ಬಿಡಬೇಕು. ರಂಜಕ, ತಿಪ್ಪೆ ಗೊಬ್ಬರ, ಡಿಎಪಿ ಸರಿಯಾದ ವೇಳೆಯಲ್ಲಿ ನೀಡಬೇಕು ಎಂದರು.

ಜೈವಿಕ ಜೀವಾಣು ಎಕರೆಗೆ ಅಜೋಸ್ಟರಿಲಂ ಅಜಟೊಬ್ಯಾಕ್ಟಾರ್ ಪ್ರತಿ ಎಕರೆಗೆ 4 ಕೆಜಿ ಮತ್ತು ಡಿಎಸ್‌ಬಿ, ಕೆಎಸ್‌ಬಿ ಪ್ರತಿ ಎಕರೆಗೆ 4 ಕೆ.ಜಿ. ನೀಡಬೇಕು. ಪೋಷಕಾಂಶಗಳ ಸಿಂಪಡಣೆ, ಬಯೋಜಮ್ ಹರಳು ಮತ್ತು ಜೀವಾಮೃತ ದ್ರವರೂಪದ ಗೊಬ್ಬರ ನೀಡುವುದರಿಂದ ಕಬ್ಬಿನ ಬೆಳೆಯಲ್ಲಿ ಅಧಿಕ ತೂಕ ಪಡೆಯಬಹುದಾಗಿದೆ ಎಂದರು.

ಕೃಷಿ ವಿದ್ಯಾಲಯದ ಸಲಹಾ ಸಮಿತಿ ಸದಸ್ಯ ನಿಂಗನಗೌಡ ಪಾಟೀಲ, ಸಾವಯವ ರೈತ ಎಸ್.ಟಿ. ಪಾಟೀಲ, ಡಾ. ಪ್ರಸಾದ ಮತ್ತು ಡಾ. ವೀಣಾ ಚಂದಾವರಿ ಮಾತನಾಡಿದರು.

ಪ್ರಗತಿಪರ ರೈತರಾದ ಸುನೀಲ ನಾರಾಯಣಕರ, ಶಿವು ಕುಂಬಾರ, ರಮೇಶ ದೇಸಾಯಿ, ಬಸೀರ್ ಅಹಮ್ಮದ ಬಳಿಗಾರ, ರೇವತಿ ಮಜ್ಜಗೆ, ರಾಯಪ್ಪ ಹರಳಯ್ಯ ಅವರನ್ನು ಸನ್ಮಾನಿಸಲಾಯಿತು.