ಮೈಸೂರು: ಕನಕದಾಸರು, ಬಸವಾದಿ ಶರಣರು, ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಗಾಂಧೀಜಿ ಅವರ ವಿಚಾರಗಳನ್ನು ಅರ್ಥ ಮಾಡಿಕೊಂಡು, ಸಮಾಜದಲ್ಲಿರುವ ಮೇಲು-ಕೀಳೆಂಬ ಅಸಮಾನತೆ ಹಾಗೂ ಜಾತಿ ವ್ಯವಸ್ಥೆ ಬದಲಾವಣೆಗೆ ಎಲ್ಲರೂ ಪ್ರಯತ್ನ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ, ಮೈಸೂರು ನಗರ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ವ್ಯಾಸರಾಯರ ಬಳಿ ಶಿಷ್ಯರಾಗಿದ್ದರು. ಅಲ್ಲಿ ಇದ್ದವರೆಲ್ಲ ಮೇಲ್ಜಾತಿಯವರಾಗಿದ್ದರು. ಅವರ ಜತೆ ಇದ್ದುಕೊಂಡು ಕನಕದಾಸರು ನಿಭಾಯಿಸಿದ್ದನ್ನು ನಾವು ಮೆಚ್ಚಬೇಕು ಎಂದರು.
ಹಿಂದೆ ವಿದ್ಯೆ ಕಲಿಯಲು ಶೂದ್ರರಿಗೆ ಅವಕಾಶ ಇರಲಿಲ್ಲ. ಸಮಾಜದ ಅಸಮಾನತೆ, ಮೇಲು ಕೀಳು ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಕನಕದಾಸರು, ಬಸವಣ್ಣ, ಬುದ್ಧ, ಅಂಬೇಡ್ಕರ್, ಗಾಂಧಿ ಅವರಂತಹ ಮಹನೀಯರು ಹೋರಾಡಿದ್ದಾರೆ. ವ್ಯವಸ್ಥೆ ಬದಲಾಗಬೇಕು. ಜಾತ್ಯತೀತ ಸಮಾಜ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದರು ಎಂದರು.
ಚಲನೆ ಇಲ್ಲದೆ ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುವುದು ಕಷ್ಟ. ಚಲನೆ ಇದ್ದ ಕಡೆ ಬದಲಾವಣೆ ಕಾಣಬಹುದು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯ ಶಕ್ತಿ ಪಡೆದರೆ ಚಲನೆ ಸಿಗುತ್ತದೆ ಎಂದರು.
ಬದಲಾವಣೆ ಬಯಸದ ಆರ್‌ಎಸ್‌ಎಸ್:
ಆರ್‌ಎಸ್‌ಎಸ್, ಸಂಘಪರಿವಾರದವರು ಜಾತಿ ವ್ಯವಸ್ಥೆ ಬದಲಾವಣೆ ಬೇಡ ಎನ್ನುತ್ತಿದ್ದಾರೆ. ಏಕೆಂದರೆ ಶೋಷಣೆ, ದೌರ್ಜನ್ಯ ಮಾಡಲು ಸಮಾಜದಲ್ಲಿ ಅಸಮಾನತೆ ಬೇಕಾಗಿದೆ. ಇವರು ಮುಸ್ಲಿಮರನ್ನು ಬೆದರುಗೊಂಬೆ ರೀತಿ ಮಾಡಿ ದೇಶ ಒಡೆಯುತ್ತಿದ್ದಾರೆ. 1920ರಲ್ಲಿ ಆರ್‌ಎಸ್‌ಎಸ್ ಹುಟ್ಟಿತು. ಅವರಲ್ಲಿ ಒಬ್ಬರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕನಕದಾಸರ 500ನೇ ಜಯಂತಿ ಹಿನ್ನೆಲೆಯಲ್ಲಿ 1988ರಿಂದ ರಾಜ್ಯ ಸರ್ಕಾರದ ವತಿಯಿಂದಲೇ ಜಯಂತಿ ಆಚರಿಸಲಾಗುತ್ತಿದೆ. ಅಂದು ನಾನು ಸಚಿವನಾಗಿದ್ದೆ. ಈ ಬಗ್ಗೆ ಅಂದಿನ ಮುಖ್ಯಮಂತ್ರಿ ಎಸ್.ಆರ್.ಮೊಮ್ಮಾಯಿ ಅವರನ್ನು ಒತ್ತಾಯಿಸಿ ಸರ್ಕಾರದಿಂದಲೇ ಜಯಂತಿ ಮಾಡಲಾಯಿತು. ಆ ಒಂದು ವರ್ಷಪೂರ್ತಿ ಕನಕದಾಸರ ಜಯಂತಿ ಆಚರಿಸಲು ತೀರ್ಮಾನಿಸಿದ್ದೆವು. ಅಂತೆಯೆ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ನಾನೇ ಆಗಿದ್ದೆ. ಆದರೆ, 1989ರ ಚುನಾವಣೆಯಲ್ಲಿ ಬೇರೆ ಸರ್ಕಾರ ಅಧಿಕಾರಕ್ಕೆ ಬಂತು. ಬಳಿಕ ಬಂದ ಸರ್ಕಾರ ಜಯಂತಿಯನ್ನು ಅರ್ಧಕ್ಕೆ ನಿಲ್ಲಿಸಿತು ಎಂದರು.
ನಂತರ ರಾಜ್ಯದ ಎಲ್ಲ ಕಡೆ ಸುತ್ತಾಡಿ ಕನಕ ಜಯಂತಿ ಆಚರಣೆ ಮಾಡಿದ್ದೆ. ಆಗ ಸಮಾಜದಲ್ಲಿ ಜಾಗೃತಿ ಮೂಡಿತು. ಪರಿಣಾಮ, ಈಗ ತಾಲೂಕು, ಜಿಲ್ಲೆ ಸೇರಿದಂತೆ ಎಲ್ಲ ಕಡೆ ಕನಕ ಜಯಂತಿ ಆಚರಿಸಲಾಗುತ್ತಿದೆ. ಅಲ್ಲಿಯವರೆಗೆ ಕನಕದಾಸರಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿರಲಿಲ್ಲ. ಕನಕದಾಸರ ಜಯಂತಿಯನ್ನು ವ್ಯಾಪಕವಾಗಿ ಎಲ್ಲ ಕಡೆ ಮಾಡುತ್ತಿರಲಿಲ್ಲ. ಆದ್ದರಿಂದ ಈ ವಿಷಯದಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಕನಕರನ್ನು ಬಯಲಿನಲ್ಲಿ ನೋಡಬೇಕು:
ಕನಕದಾಸರ ಒಟ್ಟು ಬರಹ ನೋಡಿದಾಗ ಅವರು ಭಕ್ತಿ ವಿಚಾರದಲ್ಲಿ ಬಾಗಿ ಬಿಲ್ಲಾಗುತ್ತಾರೆ. ಆದರೆ ಕನಕದಾಸರ ಹರಿಭಕ್ತ ಸಾರ ಕೃತಿ ನೋಡಿದರೆ ಶ್ರೀಹರಿ, ರಾಮ, ಕೃಷ್ಣನ ಬಗ್ಗೆ ಹಾಡಿ ಹೊಗಳಿದ್ದಾರೆ. ರಾಮಧಾನ್ಯ ಚರಿತೆಯಲ್ಲಿ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ ವಿರುದ್ಧ ಮಾತನಾಡಿದ್ದಾರೆ. ಹಾಗಾಗಿ, ಅವರು ಬಿಲ್ಲಿನ ಜತೆಗೆ ಬಾಣವಾಗಿಯೂ ಇದ್ದರು ಎಂದು ಸಾಹಿತಿ ಅರವಿಂದ ಮಾಲಗತ್ತಿ ಹೇಳಿದರು.
ಮೋಹನ ತರಂಗಿಣಿ ಮೂಲಕ ಕನಕದಾಸರು ಪ್ರೀತಿಯಿಂದ ಜಗತ್ತು ಗೆಲ್ಲಬಹುದು, ಮತ ಮತಗಳ ನಡುವೆ ಜಗಳ ಬೇಡ ಎಂದಿದ್ದಾರೆ. ಆದರೆ ಇದಕ್ಕೆ ಕೆಲವರು ಕನಕದಾಸರ ಸಾಹಿತ್ಯದಲ್ಲಿ ವಿರೋಧಾಭಾಸ ಇದೆ ಎನ್ನುತ್ತಾರೆ. ಆದ್ದರಿಂದ ಕನಕದಾಸರು ಬಯಲಿನಿಂದ ಶ್ರೀಕೃಷ್ಣನ ದರ್ಶನ ಪಡೆದಂತೆ, ನಮ್ಮ ಸಂಶೋಧಕರು ತಮ್ಮ ಗರ್ಭಗುಡಿಯಲ್ಲಿ ನಿಂತು ಕನಕದಾಸರನ್ನು ನೋಡಿದ್ದಾರೆ. ಸಂಶೋಧಕರು ಕೂಡ ಬಯಲಿನಿಂದ ಕನಕದಾಸರನ್ನು ನೋಡಿದರೆ ಅವರ ವಿಶಾಲತೆ ತಿಳಿಯುತ್ತದೆ ಎಂದರು.
ಕನಕದಾಸರು ತಮ್ಮ ಕೃತಿಯಲ್ಲಿ ಬಾಣ ಆಗುವುದೆಂದರೆ ಸ್ವಾಭಿಮಾನದ ಪ್ರತೀಕ. ಸಿದ್ದರಾಮಯ್ಯ ಅವರ ಸ್ವಾಭಿಮಾನವೂ ಅದೇ ಮಾದರಿ. ಹಾಗಾಗಿ, ಸಿದ್ದರಾಮಯ್ಯ ಎಂದರೆ ಸ್ವಾಭಿಮಾನ. ಸ್ವಾಭಿಮಾನ ಎಂದರೆ ಸಿದ್ದರಾಮಯ್ಯ ಎಂದು ಬಣ್ಣಿಸಿದರು.
ಸಮಾಜದ ಐಎಎಸ್, ಕೆಎಎಸ್ ಅಧಿಕಾರಿಗಳು, ಉದ್ಯಮಿಗಳು, ಸಮಾಜ ಸೇವಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮುಖಂಡರಾದ ರವಿಶಂಕರ್, ರಾಕೇಶ್ ಪಾಪಣ್ಣ, ಕೆ.ಮರೀಗೌಡ, ಎಂ.ಶಿವಣ್ಣ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಕೋಟೆ ಶಿವಪ್ಪ, ಡಿ.ಕೆ. ಕುನ್ನೇಗೌಡ, ಎಂ.ಬಿ. ಆನಂದ್, ಶಿವಣ್ಣ, ಕೆಂಪಣ್ಣ ಇತರರಿದ್ದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಂಜರಾಜ ಬಹದ್ದೂರ್ ಛತ್ರದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು. ಕೊಂಬು ಕಹಳೆ, ಡೊಳ್ಳು, ತಮಟೆ, ನಗಾರಿ, ಪೂರ್ಣಕುಂಭ, ಮಂಗಳವಾದ್ಯ ಸಮೇತ ಅಲಂಕೃತ ವಾಹನದಲ್ಲಿ ಕನಕದಾಸರ ಪುತ್ಥಳಿಯನ್ನು ಬೆಳ್ಳಿಯ ರಥದಲ್ಲಿರಿಸಿ ಮೆರವಣಿಗೆ ಮಾಡಲಾಯಿತು.