ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ವೃತ್ತಿ ರಂಗಭೂಮಿ ಕ್ಷೇತ್ರಗಳ ಕಾರ್ಯಕ್ರಮಗಳನ್ನು ಸಮನ್ವಯದಿಂದ ಸಂಘಟಿಸುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲ ರಾಷ್ಟ್ರೀಯ ಟ್ರಸ್ಟ್ ಗಳದ್ದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳಿಗೆ ನೇಮಕವಾಗಿರುವ ನೂತನ ಅಧ್ಯಕ್ಷ, ಸದಸ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದ ಇತರ ಜಿಲ್ಲೆಗಳು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಧಾರವಾಡ ಜಿಲ್ಲೆ ಸಾಂಸ್ಕೃತಿಕ ನಗರಿಯಾಗಿದೆ. ಇಲ್ಲಿ ರಾಷ್ಟç ಮಟ್ಟದಲ್ಲಿ ಕೀರ್ತಿ ಗಳಿಸಿರುವ ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ವೃತ್ತಿರಂಗಭೂಮಿಯ ಸಾಧಕರಿದ್ದಾರೆ. ಅವರ ಸಾಧಕ ಪರಂಪರೆಯನ್ನು ಮುಂದುವರಿಸಲು ರಾಜ್ಯ ಸರಕಾರ ಸ್ಮಾರಕ ಟ್ರಸ್ಟ್ಗಳನ್ನು ರಚಿಸಿದೆ. ಅವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು. ಎಲ್ಲ ಟ್ರಸ್ಟ್ಗಳು ಒಂದೇ ವೇದಿಕೆಯಡಿ ಕೂಡಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಡಾ. ಎಂ.ಎ0. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಪಂ. ಕೈವಲ್ಯಕುಮಾರ ಗುರವ, ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಹಾಗೂ ವಿವಿಧ ರಾಷ್ಟ್ರೀಯ ಟ್ರಸ್ಟ್ಗಳ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅವರನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಸನ್ಮಾನಿಸಿದರು.
ಟ್ರಸ್ಟ್ ಸದಸ್ಯರಾದ ಹನುಮಾಕ್ಷಿ ಗೋಗಿ, ಡಾ. ಶರಣಮ್ಮ ಗೊರೆಬಾಳ, ನಿಜಗುಣ ರಾಜಗುರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ವಂದಿಸಿದರು.
ವಿವಿಧ ಟ್ರಸ್ಟ್ ಗಳ ಸದಸ್ಯರು, ಸಂಗೀತಾಸಕ್ತರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.