ಚನ್ನಪಟ್ಟಣ: ತಾಲೂಕಿನ ಕೋಟಮಾರನಹಳ್ಳಿಯಲ್ಲಿ ಸುಲಭವಾಗಿ ಹಣ ಮಾಡುವ ವ್ಯಕ್ತಿಯ ಐಡಿಯಾ ನಂಬಿ ಗೃಹಿಣಿಯೊಬ್ಬರು ಲಾಂತರ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಗ್ರಾಮದ ಅರ್ಪಿತಾ ಹಣ, ಚಿನ್ನಾಭರಣ ಕಳೆದುಕೊಂಡವರು. ರಾಮನಗರದ ವಾಜರಹಳ್ಳಿ ಕಾಲನಿ ನಿವಾಸಿ ಬಾಲಾಜಿ ಯಾಮಾರಿಸಿರುವ ಆರೋಪಿ. ಈತನ ಮಾತು ನಂಬಿ ಅರ್ಪಿತಾ, ಸುಮಾರು 12.72 ಲ ರೂ ಮೌಲ್ಯದ 318 ಗ್ರಾಂ ಚಿನ್ನ ಹಾಗೂ 8 ಲ ರೂ. ಕಳೆದುಕೊಂಡಿದ್ದಾರೆ.
ಅರ್ಪಿತಾ ಪತಿ ಹಾಗೂ ಕುಟುಂಬ ಸಮೇತವಾಗಿ ಕಳೆದ ಅಕ್ಟೋಬರ್ನಲ್ಲಿ ತಿರುಪತಿ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅರ್ಪಿತಾ ಹಾಗೂ ಆಕೆಯ ಪತಿ ಮಧು ಎಂಬುವವರನ್ನು ರೈಲಿನಲ್ಲಿ ಪರಿಚಯ ಮಾಡಿಕೊಂಡ ಆರೋಪಿ ಬಾಲಾಜಿ, ನಾನು ಬ್ಯಾಂಕಿನಲ್ಲಿ ಹರಾಜಾಗುವ ಚಿನ್ನವನ್ನು ಖರೀದಿಸಿ, ಸಂಸ್ಥೆಗೆ ಮಾರಾಟ ಮಾಡುತ್ತೇನೆ. ಇದರಿಂದ ಬಹಳಷ್ಟು ಲಾಭ ಸಿಗಲಿದೆ. ಹರಾಜಿನಲ್ಲಿ ಕಡಿಮೆ ಬೆಲೆಗೆ ಚಿನ್ನ ಸಿಗಲಿದೆ. ನಿಮಗೆ ಬೇಕಾದರೂ ಹೇಳಿ ಇಬ್ಬರೂ ಖರೀದಿಸಿ ಲಾಭಾಂಶ ಹಂಚಿಕೊಳ್ಳೋಣ ಎಂದು ನಂಬಿಸಿದ್ದಾನೆ.
ಪರಿಚಯವಾದ ಎರಡೇ ದಿನಕ್ಕೆ 4 ಗ್ರಾಂ ಚಿನ್ನವಿದೆ ಎಂದು ಹೇಳಿ ಮಧು ಅವರಿಂದ ಹತ್ತು ಸಾವಿರ ಹಣ ಹಾಕಿಸಿಕೊಂಡಿದ್ದಾನೆ. ಈ ಮಧ್ಯೆ ಮಧು ಪತ್ನಿ ಅರ್ಪಿತಾ ಸಂಪರ್ಕಿಸಿದ ಚಾಲಾಕಿ, ನೆಕ್ಲೇಸ್ ಸೇರಿ ಹಲವು ಒಡವೆಗಳಿವೆ. ಇದರೊಂದಿಗೆ, ನಿಮ್ಮ ಬಳಿ ಇರುವ ಒಡವೆಗಳಿಗೂ ಹೆಚ್ಚಿನ ಹಣ ಸಿಗುತ್ತದೆ ಎಂದು ನಂಬಿಸಿ ಹಂತಹಂತವಾಗಿ ಲಾಂತರ ರೂ. ಹಾಗೂ ಚಿನ್ನವನ್ನು ಕಸಿದುಕೊಂಡಿದ್ದಾನೆ. ಯಾವುದೇ ಶ್ರಮಿವಿಲ್ಲದೇ ಅಧಿಕ ಹಣ ಸಂಪಾದಿಸಬಹುದು ಎಂಬ ಆಸೆಯಿಂದ ಅರ್ಪಿತಾ ಆರೋಪಿಯ ಮಾತನ್ನು ನಂಬಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.