ಜಿಲ್ಲೆ

ಸೌತಡ್ಕ ದೇವಳದೊಂದಿಗೆ ಟ್ರಸ್ಟ್‌ಗೆ ಸಂಬಂಧವಿಲ್ಲ : ಕೃಷ್ಣ ಭಟ್ ಸ್ಪಷ್ಟನೆ

ಬೆಳ್ತಂಗಡಿ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಟ್ರಸ್ಟ್ ಹಾಗೂ ಸೌತಡ್ಕ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಟ್ರಸ್ಟ್‌ನ ಆದಾಯವನ್ನು ಅದರ ರಚನೆಯ ಮೂಲ ಉದ್ದೇಶದಂತೆ ವ್ಯಯ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ಸಮಿತಿಯ ಹೆಸರಿನಲ್ಲಿ ಟ್ರಸ್ಟ್‌ನ ಮೇಲೆ ಹಲವಾರು ಆರೋಪ ಮಾಡುತ್ತಿದ್ದು ಅದು ಆಧಾರ ರಹಿತವಾಗಿದೆ. 2009ರಲ್ಲಿ ಟ್ರಸ್ಟ್ ರಚನೆಯಾಗಿದ್ದು ಟ್ರಸ್ಟ್ ಯಾವುದೇ ಜಾಗವನ್ನು ಕಾನೂನು ಬಾಹಿರವಾಗಿ ಪಡೆದಿಲ್ಲ. ಜಮೀನನ್ನು ಪರಭಾರೆ ಮಾಡುತ್ತಿದ್ದ ವ್ಯಕ್ತಿಗಳು ಟ್ರಸ್ಟ್‌ಗೆ ಈ ಜಮೀನನ್ನು ಟ್ರಸ್ಟ್ ಡೀಡ್ ಬರೆದು ಕೊಟ್ಟಿದ್ದು ಭೂಮಿಗೆ ಸಂಬಂಧಪಟ್ಟ ಬ್ಯಾಂಕ್ ಸಾಲಗಳನ್ನು ಟ್ರಸ್ಟ್ ತೀರಿಸಿದೆ ಎಂದರು.

ಈ ಜಮೀನನ್ನು ದೇವಸ್ಥಾನದ ಹುಂಡಿಯಿಂದ ತೆಗೆದ ಹಣದಿಂದ ಖರೀದಿಸಿರುವ ಯಾವುದೇ ದಾಖಲೆಗಳು ಇಲ್ಲ. ಮುಜರಾಯಿ ಇಲಾಖೆಯ ಹುಂಡಿಯಿಂದ ಅನುಮತಿಯಿಲ್ಲದೆ ಹಣ ತೆಗೆದು ಭೂಮಿ ಖರೀದಿ ಮಾಡಿದರೆ ಅದು ಕಾನೂನು ಬಾಹಿರವಾಗುತ್ತದೆ. ಟ್ರಸ್ಟ್‌ನ ಜಮೀನಿನಲ್ಲಿರುವ ವಾಣಿಜ್ಯ ಮಳಿಗೆಗಳು, ವಸತಿ ನಿಲಯಗಳ ನಿರ್ಮಾಣಕ್ಕೆ ಭಕ್ತರಿಂದ, ದಾನಿಗಳಿಂದ ಅಥವಾ ದೇವಳದ ನಿಧಿಯಿಂದ ಹಣ ಸಂಗ್ರಹ ಮಾಡಿಲ್ಲ. ಕೊಕ್ಕಡ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಅಡಮಾನ ಸಾಲ ಮಾಡಿದ್ದು ಈ ಸಾಲಗಳನ್ನು ಟ್ರಸ್ಟ್ ವತಿಯಿಂದಲೇ ತೀರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಶಾಲಪ್ಪ ಗೌಡ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ವಿನಾಯಕ ರಾವ್, ಬಾಲಕೃಷ್ಣ ನೈಮಿಷ, ಡಾ.ಎಂ.ಎಂ.ದಯಾಕರ್, ಪುರಂದರ, ಪ್ರಭಾಕರ ಹೆರಾಜೆ, ದರ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ಘಂಟೆ ವಿಚಾರದಲ್ಲಿ ಅವ್ಯವಹಾರ

ಈ ಹಿಂದೆ ದೇವಸ್ಥಾನದ ಅಗತ್ಯಕ್ಕೆಂದು ಭೂಮಿ ಖರೀದಿಸುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅದರ ಮುಂದಿನ ವಿಚಾರಗಳು ನಮಗೆ ತಿಳಿದಿಲ್ಲ. ಈ ಹಿಂದೆ ದೇವಸ್ಥಾನದಲ್ಲಿ ನಡೆದ ಘಂಟೆ ವಿಚಾರದಲ್ಲಿ ಅವ್ಯವಹಾರವಾಗಿರುವ ಬಗ್ಗೆ ತನಿಖೆ ನಡೆಸಿದ ಸಹಾಯಕ ಆಯುಕ್ತರು ಅವ್ಯವಹಾರವಾಗಿರುವುದನ್ನು ಖಚಿತ ಪಡಿಸಿದ್ದಾರೆ. ಪ್ರಕರಣದಲ್ಲಿ ಅಂದಿನ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಹರಿಶ್ಚಂದ್ರ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಕೃಷ್ಣ ಭಟ್ ತಿಳಿಸಿದರು.