ಮೈಸೂರು: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಒಂಬಡ್ಸ್‌ಮನ್ ಡಾ.ಬಾಲು ಕೆಂಚಪ್ಪ ಅಭಿಪ್ರಾಯಪಟ್ಟರು.
ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಗ್ರಾಹಕರ ಅನುಕೂಲಕ್ಕಾಗಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳಿವಳಿಕೆ ನೀಡುವುದು ನಮ್ಮ ಒಂಬಡ್ಸ್‌ಮನ್‌ನ ಜವಾಬ್ದಾರಿ. ಆರ್‌ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟ್‌ಗೆ ಹೋಗುವ ಬದಲು ಆರ್‌ಬಿಐನ ಒಂಬಡ್ಸ್‌ಮನ್‌ಗೆ ದೂರು ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಬ್ಯಾಂಕ್‌ನ ಆಂತರಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ತಿಳಿದುಕೊಳ್ಳಬೇಕು. ಬ್ಯಾಂಕ್‌ಗಳು ದೂರು ಸ್ವೀಕರಿಸಿದ 30 ದಿನಗಳ ಒಳಗೆ ದೂರುದಾರರಿಗೆ ಉತ್ತರ ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕ್‌ನ ವೆಬ್‌ಸೈಟ್ ಮುಖಪುಟದಲ್ಲಿ ಒದಗಿಸಬೇಕು. ಬ್ಯಾಂಕ್‌ನ ಶಾಖೆಯಲ್ಲಿಯೂ ಸಹ ದೂರು ಕೊಡುವ ಸೌಲಭ್ಯವಿರುತ್ತದೆ. ಗ್ರಾಹಕ ಸೇವೆಯ ಕುರಿತು ಆರ್‌ಬಿಐ ಮಾಸ್ಟರ್ ಸುತ್ತೋಲೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಆರ್‌ಬಿಐ ಒಂಬಡ್ಸ್‌ಮನ್ ಯೋಜನೆ 2021ರ ಅಡಿಯಲ್ಲಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆರ್‌ಬಿಐ ಪೋರ್ಟಲ್ ಹಾಗೂ ಇತರೆ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು. ನಾನಾ ವಿಧವಾದ ವಂಚನೆಗಳ ಬಗ್ಗೆ ತಡಿಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದರು.
ಈಗ ಗ್ರಾಹಕರಿಗಾಗಿ ಪ್ರತಿಯೊಂದು ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್‌ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಈ ಬ್ಯಾಂಕಿಂಗ್ ಒಂಬಡ್ಸ್‌ಮನ್ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಗ್ರಾಹಕರ ಪ್ರತಿಯೊಂದು ರೂಪಾಯಿಯು ವ್ಯತ್ಯಾಸವಾಗದಂತೆ ಸುರಕ್ಷಿತವಾಗಿ ಇಡುವುದು ಬ್ಯಾಂಕಿಂಗ್‌ನ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲುಭವಾಗಲಿವೆ ಎಂದರು.
ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಒಂಬಡ್ಸ್‌ಮನ್ ಯೋಜನೆ 2021ಗೆ ಸಂಬಂಧಿಸಿದ ಕರಪತ್ರ ಹಾಗೂ ಕಿರು ಹೊತ್ತಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ, ಇಂಡಿಯನ್ ಬ್ಯಾಂಕ್ ವಲಯ ವ್ಯವಸ್ಥಾಪಕ ಅನಿಲ್ ಆರ್. ಕುಲಕರ್ಣಿ, ಎಸ್‌ಬಿಐನ ಮುಖ್ಯ ವ್ಯವಸ್ಥಾಪಕ ಮನೋಜ್ ಕುಮಾರ್ ಸಾಹು ಇತರರಿದ್ದರು.