ಜಿಲ್ಲೆ

ದಾಂಪತ್ಯದಲ್ಲಿ ನಂಬಿಕೆ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಣ್ಣು ಗಂಡಿನ ನಡುವೆ ಪರಸ್ಪರ ನಂಬಿಕೆ, ಗೌರವ ಇಲ್ಲದೆ ಇದ್ದರೆ, ಅಂತಹ ದಾಂಪತ್ಯ ಜೀವನ ನರಕವಾಗಿರುತ್ತದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಇಂದುಮತಿ ಪುಟ್ಟಪ್ಪ ಪಾಟೀಲ ದತ್ತಿ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಸೌಹಾರ್ಧತೆ ಹೇಗೆ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಇಂದುಮತಿ ಪುಟ್ಟಪ್ಪ ದಂಪತಿ ಸಮಾಜಕ್ಕೆ ಮಾದರಿ. ಸಾಮಾಜಿಕ ಮತ್ತು ಕೌಟುಂಬಿಕ ವಲಯದಲ್ಲಿ ಹೆಣ್ಣನ್ನು ಗೌರವಿಸುವುದನ್ನು ಮೀರದ ಹಾಗೆ ಪಾಪು ಜೀವಿನದುದ್ದಕ್ಕೂ ಹೆಣ್ಣು ಮಕ್ಕಳನ್ನು ಸಾರ್ವಜನಿಕ ಮತ್ತು ಕುಟುಂಬದಲ್ಲಿ ಗೌರವದಿಂದ ಕಂಡರು ಎನ್ನುವುದಕ್ಕೆ ಇಂದು ಅವರನ್ನು ಸ್ಮರಿಸಿಕೊಳ್ಳುತ್ತೇವೆ. ಸ್ತ್ರೀ ಪರ ಕಾಳಜಿ ಹೊಂದಿದ ಪಾಟೀಲ ಪುಟ್ಟಪ್ಪನವರಿಗೆ ನಿಜವಾದ ಗೌರವ ಸಲ್ಲಿಸುವುದೆಂದರೆ ಪ್ರಜ್ಞಾ ಪೂರಕ ಲಿಂಗ ತಾರತಮ್ಯ ಮಾಡುವುದನ್ನು ಕೈ ಬಿಡಬೇಕು ಎಂದರು.
ಆಕಾಶವಾಣಿ ನಿಲಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ‘ಪಾಪು ಪ್ರಪಂಚದ ಇಂಪು ಕೃತಿ’ ಬಿಡುಗಡೆಗೊಳಿಸಿ ಮಾತನಾಡಿ, ಕಥೆ ಹೇಳುವ ಶೈಲಿ ಅತ್ಯಂತ ಪರಿಣಾಮಕಾರಿ. ಲೇಖಕಿ ಪಾಪು, ಇಂದುಮತಿಯವರ ದಾಂಪತ್ಯದ ಕುರಿತು ಬರೆದ ಶೈಲಿ ಕುತೂಹಲದಿಂದ ರಾಜ ರಾಣಿಯರ ಕಥೆಯನ್ನು ಓದುವಂತೆ ಓದಿಸಿಕೊಂಡು ಹೋಗುತ್ತದೆ. ಭಾಷೆ ಅಡಂಬರವಿಲ್ಲದ್ದರಿಂದ ಕೃತಕತೆ ಕಾಣದೆ ನೇರವಾಗಿ ವಿಷಯ ಹೃದಯಕ್ಕೆ ತಟ್ಟುತ್ತದೆ ಎಂದರು.
ಲೇಖಕಿ ಸಂಕಮ್ಮ ಸಂಕಣ್ಣವರ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಹಾರುಗೊಪ್ಪ, ಮಾಲತಿ ಪಟ್ಟಣಶೆಟ್ಟಿ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ನಿಂಗಣ್ಣ ಕುಂಟಿ, ಶಿವಾನಂದ ಭಾವಿಕಟ್ಟಿ, ಜ್ಯೋತಿ ಭಾವಿಕಟ್ಟಿ, ಅನಸುಯಾ ಕಾಂಬಳೆ, ಡಾ. ಲಿಂಗರಾಜ ಅಂಗಡಿ, ವಿಠಲ ಕಮ್ಮಾರ, ದ್ರಾಕ್ಷಾಯಿಣಿ ಹಿರೇಮಠ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.