ಶಿಡ್ಲಘಟ್ಟ: ವಕೀಲರು ವೃತ್ತಿಯಲ್ಲಿ ಸಹನೆ, ತಾಳ್ಮೆಯಿಂದಿರಬೇಕು. ಅದಕ್ಕೂ ಮಿಗಿಲಾಗಿ ಕಕ್ಷಿದಾರರಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಅತಿಮುಖ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ, ಯಾವುದೇ ಕೆಲಸವನ್ನಾಗಲೀ ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡಿದಾಗ ವೃತ್ತಿಯಲ್ಲಿ ಪ್ರಗತಿ ಸಾಧಿಸಲು, ಉತ್ತಮ ಸ್ಥಾನಕ್ಕೇರಲು ಸಾಧ್ಯ. ಇದಕ್ಕೆ ವಕೀಲಿಕೆ ವೃತ್ತಿಯೂ ಹೊರತಲ್ಲ ಎಂದು ಹೇಳಿದರು.
ಯಾವುದೇ ಪ್ರಕರಣವನ್ನು ಕೈಗೆತ್ತಿಕೊಂಡಾಗ ಅದರಲ್ಲಿ ಸೋಲು ಅಥವಾ ಗೆಲುವು ಮುಖ್ಯವಲ್ಲ. ಪ್ರಕರಣದಲ್ಲಿನ ಸತ್ಯಾಸತ್ಯತೆ ತಿಳಿದು ವಾದ ಮಾಡುವುದು ಮುಖ್ಯ. ವಾದದಲ್ಲಿ ಸೋತರೆ ಕಕ್ಷಿದಾರನಿಗೆ ಅರ್ಥ ಮಾಡಿಸುವ ಕೆಲಸ ಮಾಡಿ, ನಿಮ್ಮ ವಕೀಲಿಕೆ, ವಾದದ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಪ್ರಕರಣದಲ್ಲಿ ಸೋಲಾದರೂ ನಿಮ್ಮ ಕಕ್ಷಿದಾರ ನಿಮ್ಮನ್ನು ದೂಷಿಸಬಾರದು. ಅಂತಹ ನಂಬಿಕೆ ಗಳಿಸಿಕೊಳ್ಳುವ ಕೆಲಸ ವಕೀಲರಿಂದ ಆಗಬೇಕಿದೆ ಎಂದು ಹೇಳಿದರು.
ವಕೀಲರ ದಿನಾಚರಣೆ ಆಚರಿಸುವ ಮೂಲಕ ಹಿರಿಯ ವಕೀಲರು ಕಿರಿಯ ವಕೀಲರಿಗೆ ವೃತ್ತಿ ಬದುಕಿನ ಅನುಭವವನ್ನು ಹಂಚಿಕೊಳ್ಳಬೇಕು. ಸಲಹೆ ಸೂಚನೆಗಳನ್ನು ತಿಳಿಸಿ ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಲು ನೆರವಾಗಬೇಕು
ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ವಕೀಲರ ಸಂಘವು ಇಲ್ಲಿ ಸುಭದ್ರವಾಗಿದ್ದು, ವಕೀಲರಿಗೆ ವೃತ್ತಿ ವಿಷಯದಲ್ಲಿ ಸಮಸ್ಯೆ ಎದುರಾದರೆ ಸಂಘ ನಿಮ್ಮೊಂದಿಗೆ ಇರಲಿದೆ. ಎಲ್ಲ ಹಿರಿಯ ಕಿರಿಯ ವಕೀಲರು ಪರಸ್ಪರ ಸಹಕಾರದೊಂದಿಗೆ ವೃತ್ತಿಯಲ್ಲಿ ಉನ್ನತಿ ಸಾಧಿಸಿ ಸಮಾಜದಲ್ಲಿ ಉತ್ತಮ ಹೆಸರುಗಳಿಸಬೇಕೆಂದು ಹೇಳಿದರು.
ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ ಮಾತನಾಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲರು, ನ್ಯಾಯಾಲಯದ ಸಿಬ್ಬಂದಿ ಇದ್ದರು.