ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ, ಪದವಿ ಪ್ರದಾನ ಸಮಾರಂಭದಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ನಿರ್ದೇಶಕ ಪ್ರೊ. ಸುದೀಪ್ ಗುಪ್ತ ಮಾತನಾಡಿದರು. ಡಾ| ಎಚ್.ಎಸ್. ಬಲ್ಲಾಳ್ ಮತ್ತಿತರರಿದ್ದರು. 
ಜಿಲ್ಲೆ

ಮಾನವೀಯ ಅನುಕಂಪದಲ್ಲೇ ನೈಜ ಶಕ್ತಿ

Chethan padubidri

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಸುದೀಪ್ ಗುಪ್ತ ಅನಿಸಿಕೆ
  • ಮಾಹೆ 33ನೇ ಘಟಿಕೋತ್ಸವ, ಪದವಿ ಪ್ರದಾನ

ಮಂಗಳೂರು: ಕೇವಲ ಕಾಲ್ಪನಿಕ ವಿವರಣೆಗಳನ್ನು ನೀಡುವ AI ಅಲ್ಗಾರಿದಮ್‌ಗಳಿಗಿಂತ ಭಿನ್ನವಾಗಿ, ರೋಗಿಗಳ ಭಯ ಮತ್ತು ಭರವಸೆಗಳನ್ನು ಅರ್ಥ ಮಾಡಿಕೊಳ್ಳುವ ಮಾನವೀಯ ಅನುಕಂಪದಲ್ಲೇ ನಿಮ್ಮ ನಿಜವಾದ ಶಕ್ತಿ ಅಡಗಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ ನಿರ್ದೇಶಕ ಪ್ರೊ. ಸುದೀಪ್ ಗುಪ್ತ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಮಂಗಳೂರು ಕ್ಯಾಂಪಸ್‌ನ ಡಾ. ಟಿ.ಎಂ.ಎ. ಪೈ ಕನ್ವೆನ್ಷನ್ ಸೆಂಟರ್ ನಡೆದ 33ನೇ ಘಟಿಕೋತ್ಸವ, ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಭಾರತವು ವಿಕಸಿತದತ್ತ ವೇಗವಾಗಿ ಮುನ್ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಸರಾಸರಿ ಜೀವಿತಾವಧಿ ದುಪ್ಪಟ್ಟಾಗಿದೆ. ಸ್ವಾತಂತ್ರ್ಯದ ಸಂದರ್ಭ 36 ಕೋಟಿ ಇದ್ದ ಜನಸಂಖ್ಯೆ ಇಂದು 148 ಕೋಟಿಯತ್ತ ತಲುಪಿದೆ. 2047ರ ವೇಳೆಗೆ ಭಾರತದ ಜಿಡಿಪಿ ಮತ್ತು ತಲಾ ಆದಾಯ ನಾಲ್ಕು ಪಟ್ಟು ಹೆಚ್ಚಾಗಲಿದೆ. ಕೇವಲ ಸಾಂಪ್ರದಾಯಿಕ ಸಂಪತ್ತಾಗಿರುವ ಚಿನ್ನದ ಮೇಲಲ್ಲದೆ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಹಾಗೂ ನಾವೀನ್ಯಯುತ ಆರೋಗ್ಯ ಕ್ಷೇತ್ರದ ಜ್ಞಾನದ ಆಧಾರದ ಮೇಲೆ ಹೊಸ ರಾಷ್ಟ್ರೀಯ ಸಂಪತ್ತನ್ನು ರೂಪಿಸಬೇಕಿದೆ ಎಂದರು.

ಅಗತ್ಯ ಜ್ಞಾನ, ಕೌಶಲ:ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಶೈಕ್ಷಣಿಕ ಶಿಸ್ತು, ಅತ್ಯುತ್ತಮ ಸಂಶೋಧನೆ ಹಾಗೂ ನಾವೀನ್ಯತೆಯ ಬಲದೊಂದಿಗೆ ಮಾಹೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇಂದಿನ ವೃತ್ತಿಪರ ಜಗತ್ತಿನ ಸವಾಲುಗಳನ್ನು ಎದುರಿಸಿ, ಭವಿಷ್ಯದ ನಾಯಕರಾಗಿ ಹೊರಹೊಮ್ಮಲು ಅಗತ್ಯವಿರುವ ಜ್ಞಾನ ಮತ್ತು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ಹೇಳಿದರು.

ನಿಟ್ಟೆ ಎಜುಕೇಶನ್ ಟ್ರಸ್ಟ್ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿ ಡಾ. ನಾರಾಯಣ ಸಭಾಹಿತ್, ಕುಲಸಚಿವ ಡಾ. ಗಿರಿಧರ್ ಕಿಣಿ ಹಾಗೂ ಮೌಲ್ಯಮಾಪನ ಕುಲಸಚಿವ ಡಾ. ವಿನೋದ್ ಥಾಮಸ್ ಉಪಸ್ಥಿತರಿದ್ದರು.

ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ-ಕುಲಪತಿ ಡಾ. ದಿಲೀಪ್ ನಾಯಕ್ ಸ್ವಾಗತಿಸಿದರು. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು ಹಾಗೂ ಮಣಿಪಾಲದ ಕೆಎಂಸಿ ಡೀನ್ ಡಾ. ಅನಿಲ್ ಭಟ್ ಅವರು ಅತಿಥಿಯನ್ನು ಪರಿಚಯಿಸಿದರು. ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಡೀನ್ ಡಾ. ಆಶಿತಾ ಉಪ್ಪೂರು ವಂದಿಸಿದರು.

1,258 ಮಂದಿಗೆ ಪದವಿ ಪ್ರದಾನ

ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಪದವಿ ಪ್ರದಾನ ಮಾಡಿದರು. ಈ ವರ್ಷ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್‌ಗಳನ್ನು ಒಟ್ಟು 1,258 ವಿದ್ಯಾರ್ಥಿಗಳು ಪಡೆದಿದ್ದಾರೆ. ಇವರಲ್ಲಿ 576 ವಿದ್ಯಾರ್ಥಿಗಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಸಾಧನೆ ಮಾಡಿದ ಮಣಿಪಾಲದ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿ ನವಲ್‌ಪ್ರೀತ್ ಸಿಂಗ್ ಭಮ್ರಾ, ಮಂಗಳೂರಿನ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿನಿ ಅದೀಬಾ ಅಲಿ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (2021-22ರ ಎಂಬಿಬಿಎಸ್ ಬ್ಯಾಚ್) ವಿದ್ಯಾರ್ಥಿನಿ ಚೈತ್ರಾ ಶೆಣೈ ಅವರಿಗೆ ಪ್ರತಿಷ್ಠಿತ ‘ಡಾ. ಟಿ.ಎಂ.ಎ. ಪೈ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.

ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿತ್ವದಿಂದ ಮಣಿಪಾಲ ಸಂಸ್ಥೆಗಳು ಅಭಿವೃದ್ಧಿಯತ್ತ ಮುನ್ನುಗ್ಗುತ್ತಲೇ ಇದೆ. ಮಣಿಪಾಲ ಸಂಸ್ಥೆಯಲ್ಲಿ ಕಲಿತ ನೀವು ಇಲ್ಲಿಯವರೆಗೆ ಬರೆದ ಯಶಸ್ಸಿನ ಕಥೆಯೇ ನಿಮ್ಮ ಭವಿಷ್ಯಕ್ಕೆ ದಾರಿದೀಪ. ಶ್ರೀಮಂತ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವ ಮಾಹೆ ಸಂಸ್ಥೆಯ ಶ್ರಮ ಶ್ಲಾಘನೀಯ.

— ಡಾ. ಎಂ. ಶಾಂತಾರಾಮ್ ಶೆಟ್ಟಿ, ಸಹ ಕುಲಾಧಿಪತಿ, ನಿಟ್ಟೆ ಎಜುಕೇಶನ್ ಟ್ರಸ್ಟ್