ಜಿಲ್ಲೆ

ಅರಿವಿನ ಜಾಗೃತಿ ಮಾಡುವುದೇ ನಿಜವಾದ ಶಿಕ್ಷಣ

ಬಸವರಾಜ ವೀರಪ್ಪ ಗರಗ

ಗೋಕರ್ಣ: ಅಂಕ ಗಳಿಕೆ ಅಥವಾ ರ್ಯಾಂಕ್ ಮೇಲಿಂದ ಮಾತ್ರ ಶಿಕ್ಷಣದ ಗುಣಮಟ್ಟದ ನಿರ್ಧಾರವಾಗಬಾರದು. ಶಾಲೆಯಲ್ಲಿ ನೀಡಲಾಗುವ ಶಿಕ್ಷಣ ಯಾವ ಪ್ರಮಾಣದಲ್ಲಿ ವಿದ್ಯಾರ್ಥಿಯ ಅಂತರಂಗದ ಅರಿವಿನ ಜಾಗೃತಿಗೆ ಕಾರಣವಾಗುತ್ತದೆ ಎನ್ನುವುದು ನಿಜವಾದ ಶೈಕ್ಷಣಿಕ ಕ್ರಮವಾಗಿದೆ ಎಂದು ಮುರ್ಡೆಶ್ವರದ ಆರ್​ಎನ್​ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ, ಪ್ರಾಚಾರ್ಯ ಡಾ.ದಿನೇಶ ಎಂ. ಗಾಂವಕರ ಹೇಳಿದರು.

ಹಿರೇಗುತ್ತಿಯ ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಶಾಂತ ನಾಯಕ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಮಾದನಗೇರಿ ಶ್ರೀ ಮಹಾಲಸಾ ಸಿದ್ಧಿವಿನಾಯಕ ಮಂದಿರ ಟ್ರಸ್ಟ್ ಅಧ್ಯಕ್ಷ ಸುನೀಲ ಪೈ, ಕಾಲೇಜ್ ಪ್ರಾಚಾರ್ಯ ರಾಜೀವ ನಾಯ್ಕ, ಆಡಳಿತ ಮಂಡಳಿ ಸದಸ್ಯರಾದ ನಾಗೇಶ ಟಿ. ನಾಯಕ, ಉದ್ದಂಡ ಗಾಂವಕರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ನಾಯಕ ಸಂಸ್ಥೆ ಸಾಗಿ ಬಂದ ದಾರಿ ಮತ್ತು ಸಾಧನೆ ವಿವರಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಮಹಾದೇವ ಬಿ.ಗೌಡ, ನಾಗರಾಜ ಜಿ. ನಾಯಕ, ರಾಮಕೃಷ್ಣ ಎನ್. ನಾಯಕ ಮತ್ತು ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಗಾಂವಕರ, ಉಪನ್ಯಾಸಕ ನಾಗರಾಜ ವಿ. ಗಾಂವಕರ, ಶಿಕ್ಷಕಿ ಸುಮನ್ ಫರ್ನಾಂಡಿಸ್, ಭಾಗೀರಥಿ ಹಳ್ಳೇರ, ಇತರರು ಉಪಸ್ಥಿತರಿದ್ದರು.ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ, ಶಿಕ್ಷಕರಾದ ಎನ್. ರಾಮು, ಮಹಾದೇವ ಗೌಡ ಕಾರ್ಯಕ್ರಮ ನಿರ್ವಹಿಸಿದರು.