ಜಿಲ್ಲೆ

ಜಾಲತಾಣದಿಂದ ನೈಜ ಪತ್ರಕರ್ತರಿಗೆ ತೊಂದರೆ

ಬೇಲೂರು: ಮಾಧ್ಯಮ ಕ್ಷೇತ್ರ ವ್ಯಾಪಕವಾಗಿ ಬೆಳೆಯುವುದರ ಜತೆಗೆ ಸಾಮಾಜಿಕ ಜಾಲತಾಣ ಸಹ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಮೊಬೈಲ್ ಹಿಡಿದು ನಾನು ಪತ್ರಕರ್ತ ಎನ್ನುವವರಿಂದ ನೈಜ ಪತ್ರಕರ್ತರಿಗೆ ಧಕ್ಕೆಯಾಗುತಿದ್ದು, ಇದರ ವಿರುದ್ಧ ಕ್ರಮಕ್ಕೆ ರಾಜ್ಯ ಸಂಘ ಮುಂದಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನ್‌ಗೌಡ ಹೇಳಿದರು.

ಪಟ್ಟಣದ ಸುದನ್ವಗೌಡ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯದ ಸುದ್ದಿ ಸಂಗ್ರಹ ಹಾಗೂ ಬರವಣಿಗೆಯಂತಹ ಒತ್ತಡದ ಜೀವನ ಪತ್ರಕರ್ತರದ್ದು. ಆದರೂ, ಪತ್ರಕರ್ತರಾದವರು ವಸ್ತುನಿಷ್ಠ ವರದಿಗೆ ಪ್ರಾಮುಖ್ಯತೆ ನೀಡಬೇಕು. ಸತ್ಯಾಸತ್ಯತೆಯನ್ನು ಜಗತ್ತಿಗೆ ಬಿತ್ತರಿಸುವಂತಾಗಬೇಕು. ಪತ್ರಕರ್ತರರಾದವರು ಹೆಚ್ಚಿನ ಅಧ್ಯಯನದ ಮೂಲಕ ಜ್ಞಾನವನ್ನು ಪಡೆಯಬೇಕು. ಸುದ್ದಿಯನ್ನು ತುರ್ತಾಗಿ ಕಳುಹಿಸುವ ಬರದಲ್ಲಿ ಮನಸ್ಸಿಗೆ ಬಂದಂತೆ ಬರೆದರೆ ಅರ್ಥವಿರುವುದಿಲ್ಲ. ನಿಯಮಾನುಸಾರ ಸುದ್ದಿಗಳನ್ನು ಬರೆಯಬೇಕೆಂದರು.

ನಿವೃತ್ತ ಪತ್ರಕರ್ತರಿಗೆ ಹಿಂದಿನ ಸರ್ಕಾರ 4ಸಾವಿರ ಮಾಸಿಕ ವೇತನ ನೀಡುತಿತ್ತು. ಆದರೆ, ಈಗಿನ ಸರ್ಕಾರ ಅದನ್ನು 12 ಸಾವಿರ ರೂ. ಗಳಿಗೆ ಏರಿಸಿ ಅನುಕೂಲ ಕಲ್ಪಿಸಿದೆ. ಪತ್ರಕರ್ತರು ವೃತ್ತಿಯೊಂದಿಗೆ ಇತರೆ ಕೆಲಸಗಳನ್ನು ಮಾಡುವತ್ತ ಮುಂದಾಗಬೇಕು ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ನಾನು ಶಾಸಕನಾಗಿದ್ದೇನೆಯೇ ಹೊರತು ವರ್ಗಾವಣೆ ದಂಧೆ ಅಥವಾ ಹಣ ಮಾಡುವ ಉದ್ದೇಶದಿಂದಲ್ಲ. ಬೇಲೂರು ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ ಎಂದು ಎಲ್ಲಾ ಮಂತ್ರಿಗಳಿಗೆ ಅನುದಾನ ಕೋರಿ ಮನವಿ ಸಲ್ಲಿಸಿದರೂ ಸರ್ಕಾರ ಅನುದಾನ ನೀಡಲು ಮೀನಾ-ಮೇಷ ಎಣಿಸುತ್ತಿದೆ ಎಂದರು.
ಹಿಂದಿನ ಅವಧಿಯಲ್ಲಿ ತಡೆಯಾಗಿದ್ದ ಕಾಮಗಾರಿಗಳಿಗೆ ಪುನಶ್ಚೇತನ ನೀಡಲಾಗಿದೆ. ಪತ್ರಿಕಾರಂಗ ಸಮಾಜದಲ್ಲಿ ತನ್ನದೆಯಾದ ಅಸ್ತಿತ್ವ ಹೊಂದಿದ್ದು, ಸತ್ಯಕ್ಕೆ ಹತ್ತಿರವಾದ ಸುದ್ದಿಗೆ ಒತ್ತು ನೀಡಬೇಕಿದೆ ಎಂದರು. ಬೇಲೂರು ಪತ್ರಕರ್ತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯ ರವಿ ನಾಕಲಗೂಡು ಮಾತನಾಡಿ, ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳು ಶಿಸ್ತಿನಿಂದ ನಡೆಸಬೇಕಿದೆ. ಸಂಘದ ಸರ್ವತೋಮುಖ ಬೆಳೆವಣಿಗೆಗೆ ಮಹತ್ವ ನೀಡಬೇಕು ಎಂದರು.

ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್, ಗಣೇಶ್, ಚಂದ್ರಶೇಖರ್, ಹರೀಶ್, ರಂಜಿತ್, ಸಾಕೇತ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ, ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ಮೋಹನ್‌ಕುಮಾರ್, ಎಚ್.ಟಿ.ಮೋಹನ್ ಕುಮಾರ್, ಕಾರ್ಯದರ್ಶಿ ನಟರಾಜ್, ಪ್ರಕಾಶ್, ಅತೀಕ್ ಉರ್ ರೆಹಮಾನ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್, ಉದ್ಯಮಿ ಬಿ.ಎಂ.ಸಂತೋಷ್ ಇತರರು ಇದ್ದರು.