ವಿಜಯವಾಣಿ ಸುದ್ದಿಜಾಲ ಉಡುಪಿ
ವಕೀಲ ವೃತ್ತಿಯ ಶಿಕ್ಷಣ ಆಯ್ಕೆ (ಚಾಯ್ಸ್) ಆಗಿರಬೇಕೇ ಹೊರತು ಅವಕಾಶ (ಚಾನ್ಸ್) ಆಗಿರಬಾರದು. ಇದು ಸಮಾಜದ ಸೇವೆಗೆ ಇರುವ ನೋಬಲ್ (ತಿಳಿವಳಿಕೆ) ವೃತ್ತಿಯಾಗಿದೆ. ವಕೀಲರು ನ್ಯಾಯದ ಏಜೆಂಟರಾಗಿದ್ದು, ಹಣ ಗಳಿಕೆಗೆ ಆದ್ಯತೆ ನೀಡಬಾರದು. ನೊಂದವರಿಗೆ ನ್ಯಾಯ ಕೊಡಿಸಲು ಹೋರಾಡಬೇಕು. ಮಹಾತ್ಮ ಗಾಂಧೀಜಿಯೂ ಸಹ ಇದೇ ಸಂದೇಶ ನೀಡಿದ್ದು, ವಿದ್ಯಾರ್ಥಿಗಳು ಈ ವೃತ್ತಿಯನ್ನು ಗಂಭೀರವಾಗಿ ಸ್ವೀಕರಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ
ಎಚ್.ಪಿ. ಸಂದೇಶ ಕರೆ ನೀಡಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 3 ದಿನ ನಡೆದ ಪ್ರತಿಷ್ಠಿತ ಅಡ್ವೋಕೇಟ್ ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಏ.13ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಗೆಲುವು ಸಾಧಿಸಿದ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು.
ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಪಿ.ಜ್ಯೋತಿಮಣಿ ಮಾತನಾಡಿ, ಇತ್ತೀಚೆಗಿನ ವರ್ಷಗಳಲ್ಲಿ ಜನರು ಸಣ್ಣ ಸಣ್ಣ ವಿಚಾರಗಳಿಗೂ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಅದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಸಕಾಲಕ್ಕೆ ತೀರ್ಪು ಲಭಿಸುತ್ತಿಲ್ಲ. ಹೀಗಾಗಿ ಜನರು ಭಾರತವೂ ಸೇರಿದಂತೆ ವಿಶ್ವದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ನಲ್ಲಿ ಯಾವುದೇ ಪ್ರಕರಣವೂ ಬಾಕಿ ಇರುವುದಿಲ್ಲ. ಭಾರತದಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥವಾಗುತ್ತಿದ್ದರೂ 65ರಿಂದ 70 ಸಾವಿರ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿಯುತ್ತಿದೆ. ಮದ್ರಾಸ್ ಹೈಕೋರ್ಟ್ನಲ್ಲಿ ನಾನು ಜಡ್ಜ್ ಆದಾಗ 45 ವರ್ಷದ ಹಳೆಯ ಪ್ರಕರಣ ಬಾಕಿ ಇರುವುದು ಕಂಡು ಆತಂಕಗೊಂಡಿದ್ದೆ. ತಾವುಗಳು ಜಡ್ಜ್ಗಳಾದರೆ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥ ಮಾಡಬೇಕೆಂದು ಸಲಹೆಯಿತ್ತರು.
ಕಾಲೇಜಿನ ನಿರ್ದೇಶಕಿ ಪ್ರೊ. (ಡಾ.) ನಿರ್ಮಲಾಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ ಕೆ.ಎಸ್. ಉಪಸ್ಥಿತರಿದ್ದರು.
ಸ್ಪರ್ಧೆಯ ಸಂಯೋಜಕಿ ಸುರೇಖಾ ಕೆ. ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಪ್ರಾಂಜಲಿ ಪ್ರಾರ್ಥಿಸಿದರು. ಪ್ರೊ.ರೋಹಿತ್ ಅಮೀನ್ ಸ್ವಾಗತಿಸಿದರು. ವೈಷ್ಣವಿ ಎಂ. ಹಾಗೂ ರೋಸ್ ಥೆರೇಸಾ ಪೌಲ್ ಅತಿಥಿಗಳನ್ನು ಪರಿಚಯಿಸಿದರು. ಪಾರ್ವತಿ ಎ.ಆರ್. ಕಾರ್ಯಕ್ರಮ ನಿರ್ವಹಿಸಿದರು. ಡಾ. ಜಯಾ ಮೋಲ್ ವಂದಿಸಿದರು.
ಸ್ಪರ್ಧೆಯಲ್ಲಿ ಬೆಂಗಳೂರಿನ ಕೆಎಲ್ಇ ಲಾ ಕಾಲೇಜು ಪ್ರಥಮ ಸ್ಥಾನ ಪಡೆಯುವ ಮೂಲಕ 20 ಸಾವಿರ ರೂ. ನಗದು ಹಾಗೂ ಟ್ರೋಫಿ ಸ್ವೀಕರಿಸಿತು. ಬೆಂಗಳೂರಿನ ಸೌಂದರ್ಯ ಲಾ ಕಾಲೇಜು 10 ಸಾವಿರ ರೂ. ನಗದು ಹಾಗೂ ರನ್ನರ್ಅಪ್ ಶೀಲ್ಡ್ ಪಡೆಯಿತು. ಉತ್ತಮ ತೀರ್ಪು ಬರಹ ಸ್ಪರ್ಧೆಯಲ್ಲಿ ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನ ವಿಭಾಲಿ ಎಸ್. ರಾಜ್ (ಪ್ರ), ಪುತ್ತೂರು ವಿವೇಕಾನಂದ ಲಾ ಕಾಲೇಜಿನ ಸ್ಫೂರ್ತಿ ಪಿ.ಇ. (ದ್ವಿ) ಬಹುಮಾನ ಪಡೆದರು. ಬೆಸ್ಟ್ ಲೇಡಿ ಅಡ್ವೋಕೇಟ್- ಬೆಂಗಳೂರು ಕೆಎಲ್ಇ ಲಾ ಕಾಲೇಜಿನ ಚಂದ್ರಲೇಖಾ ಕೆ.ಎಂ. ಬೆಸ್ಟ್ ಜಂಟಲ್- ಹುಬ್ಬಳ್ಳಿ ಕೆಎಲ್ಇ ಸೊಸೈಟಿಯ ಜಿ.ಕೆ. ಲಾ ಕಾಲೇಜಿನ ಸಂತೋಷಕುಮಾರ ಹರ್ತಿ. ಬೆಸ್ಟ್ ಮೆಮೋರಿಯಲ್ಸ್- ಬೆಳಗಾವಿಯ ಆರ್.ಎಲ್. ಲಾ ಕಾಲೇಜು ಪ್ರಶಸ್ತಿ ಪಡೆದವು.
ವೃತ್ತಿಪರರಾದ ತಾವುಗಳು ನಿರಂತರ ಓದಿಗೆ ಆದ್ಯತೆ ನೀಡಬೇಕು. ದೇಶವೂ ಸೇರಿದಂತೆ ವಿಶ್ವದ ಕೋರ್ಟ್ಗಳಲ್ಲಿ ನೀಡುವ ತೀರ್ಪುಗಳ ಬಗ್ಗೆ ಅಧ್ಯಯನ ಮಾಡಬೇಕು. ಸಾಧಕರ ಬಯೋಗ್ರಫಿ, ಅಟೋಗ್ರಫಿಯನ್ನು ಓದಬೇಕು. ಅದರಿಂದ ವಕೀಲ ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಬಹುದು. | ಪ್ರೊ. (ಡಾ.) ಚಿದಾನಂದ ರೆಡ್ಡಿ ಎಸ್. ಪಾಟೀಲ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು