ಅಣ್ಣಿಗೇರಿ: ಸಂಕ್ರಾಂತಿ ಹಬ್ಬದಂದು ತಾಲೂಕಿನ ಕೊಂಡಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63ರ ಸವಳಹಳ್ಳದ ಶ್ರೀ ತ್ರಿವೇಣಿ ಸಂಗಮೇಶ್ವರನ (ಸವಳಹಳ್ಳ) ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಸಂಗಮೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ, ಧಾರ್ವಿುಕ ವಿಧಿ ವಿಧಾನ ನಡೆದವು. ನಂತರ ಭಕ್ತರು ಹಳ್ಳದಲ್ಲಿ ಮರಳಿನಿಂದ ಶಿವಲಿಂಗ ಮಾಡಿ ಭಕ್ತಿಭಾವ ಮೆರೆದರು.
ಸಂಜೆ ರಥೋತ್ಸವಕ್ಕೆ ಅಣ್ಣಿಗೇರಿ ದಾಸೋಹ ಮಠದ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿದ್ದರು. ರಥೋತ್ಸವದ ಉದ್ದಕ್ಕೂ ‘ಸಂಗಮೇಶ್ವರ ಮಹಾರಾಜಕಿ ಜೈ’ ಎಂದು ಘೊಷಣೆ ಕೂಗಿದರು. ನಂತರ ಸಂಗೀತ ರಸಮಂಜರಿ ನಡೆಯಿತು.
ಅಣ್ಣಿಗೇರಿ ನಗರ ಪೊಲೀಸ್ ಠಾಣೆ ಅಧಿಕಾರಿ ಸಿದ್ಧಾರೂಢ ಆಲದಕಟ್ಟೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೆರವೇರಿಸಲಾಗಿತ್ತು. ಕೊಂಡಿಕೊಪ್ಪ, ಅಣ್ಣಿಗೇರಿ, ಸೈದಾಪುರ, ಸಾಸ್ವಿಹಳ್ಳಿ, ಹಳ್ಳಿಕೇರಿ, ಹುಲಕೋಟಿ ಭಕ್ತರು ಪಾಲ್ಗೊಂಡಿದ್ದರು.