ಉಳ್ಳಾಲ: ದೇಶದಲ್ಲಿ ಭಾರಿ ವಾಹನಗಳಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚಾಲಕರಿಗೆ ತರಬೇತಿ ಅತ್ಯಗತ್ಯ. ಪಜೀರ್‌ನಲ್ಲಿ ಲಘು ವಾಹನ ತರಬೇತಿ ಕೇಂದ್ರವನ್ನೂ ತೆರೆಯಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಅಭಿಪ್ರಾಯಪಟ್ಟರು.
ಕಂಬಳಪದವಿನಲ್ಲಿ ಶನಿವಾರ ಭಾರಿ ವಾಹನ ಚಾಲನಾ ತರಬೇತಿ ಕೇಂದ್ರ ಆಡಳಿತ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೊಂದೆಡೆ, ಐದು ವರ್ಷ ಅಪರಾಧ, ಅಪಘಾತ ಮಾಡದ ಚಾಲಕರಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಇಲಾಖೆ ಬೆಳ್ಳಿ ಪದಕ, 15 ವರ್ಷವಾದರೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಇಲಾಖೆ ಸಚಿವ ಅಂಗಾರ, ಅಲೆಮಾರಿ-ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರು ಇಲೆಕ್ಟ್ರಿಕಲ್ ಬೋರ್ಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಪಂ ಸದಸ್ಯ ನವೀನ್ ಪಾದಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಸ್ವಾಗತಿಸಿ, ರಾಜ್ಯ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಳ್ಳಾಲಕ್ಕಿಲ್ಲ ಆರ್‌ಟಿಒ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್, ಜಿಲ್ಲೆಯ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಚಿವರು ಮುಂದಾಗಬೇಕು. ನಮ್ಮಲ್ಲಿರುವ ಭಾರಿ ವಾಹನ ಚಾಲಕರು ಆಂಧ್ರಪ್ರದೇಶ ಮತ್ತು ತಮಿಳ್ನಾಡು ಮೂಲದವರು. ತರಬೇತಿ ಜವಾಬ್ದಾರಿ ವಹಿಸುವ ಸಂಸ್ಥೆಗೆ ಕನಿಷ್ಠ ಶುಲ್ಕ ನಿಗದಿಪಡಿಸಬೇಕು. ಲಘು ವಾಹನ ತರಬೇತಿ ಕೇಂದ್ರ ಮತ್ತು ಆರ್‌ಟಿಒ ಕಚೇರಿಗೂ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಾರಿಗೆ ಸಚಿವ ಸವದಿ, ಲಘು ವಾಹನ ತರಬೇತಿ ಶೀಘ್ರ ಆರಂಭಿಸಬಹುದು. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಆರ್‌ಟಿಒ ಆರಂಭ ಭರವಸೆ ನೀಡಲು ಸಾಧ್ಯವಿಲ್ಲ ಎಂದರು.
ಸ್ವಾಗತ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಶೈನಿಂಗ್!: ಉಪ ಮಖ್ಯಮಂತ್ರಿ ಲಕ್ಷ್ಮಣ ಸವದಿ ಉಳ್ಳಾಲ ಭಾಗಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ತರಬೇತಿ ಕೇಂದ್ರಕ್ಕೆ ಹೋಗುವ ರಸ್ತೆಯಲ್ಲಿ ಫ್ಲೆಕ್ಸ್ ಅಳವಡಿಸಿ ಸ್ವಾಗತ ಕೋರಲಾಗಿತ್ತು. ಆದರೆ ಈ ಎಲ್ಲ ಫ್ಲೆಕ್ಸ್‌ಗಳು ಕಾಂಗ್ರೆಸ್ ಮುಖಂಡರೇ ಹಾಕಿದ್ದು ವಿಶೇಷವಾಗಿತ್ತು.
ಉದ್ಧವ್ ಅಪ್ರಬುದ್ಧ ಹೇಳಿಕೆ: ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎನ್ನುವ ಅವರ ಹೇಳಿಕೆ ಉದ್ಧಟತನದಿಂದ ಕೂಡಿದೆ. ಮೂರು ಪಕ್ಷಗಳೊಂದಿಗೆ ಸರ್ಕಾರ ರಚಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕರ್ನಾಟಕದ ವಿರುದ್ಧ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ಸ್ಥಿತಿ ಈಗ ಎತ್ತು ನೀರಿಗೆಳೆದರೆ, ಕೋಣ ದಡಕ್ಕೆ ಎಳೆಯಿತು ಎಂಬಂತಾಗಿದೆ. ಅಲ್ಲಿನ ಜನರ ಗಮನ ಬೇರೆ ಕಡೆಗೆ ಸೆಳೆಯಲು ಉದ್ಧವ ಠಾಕ್ರೆ ಕರ್ನಾಟಕದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯಲ್ಲಿ ಪ್ರತೀ ವರ್ಷ ಅಧಿವೇಶವೂ ನಡೆಯುತ್ತಿದೆ. ಇದೆಲ್ಲ ಗೊತ್ತಿದ್ದರೂ, ಠಾಕ್ರೆ ಜನರ ಹಾದಿ ತಪ್ಪುವ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮರಾಠಿ ಸಮುದಾಯ ಹೆಚ್ಚಿರುವ ಕಾರಣ, ಆ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು ಸಿಎಂ ಠಾಕ್ರೆ ವಾದ. ಹಾಗಿದ್ದರೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ಭಾಗಗಳು ಕರ್ನಾಟಕಕ್ಕೆ ಸೇರಬೇಕು ಎನ್ನುವ ನಮ್ಮ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಚಿವ ಸವದಿ ಪ್ರಶ್ನಿಸಿದರು.
ಸಾರಿಗೆ ಸಿಬ್ಬಂದಿ ವೇತನ ಪಾವತಿಗೆ ಕ್ರಮ: ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಿಬ್ಬಂದಿಗೆ ಡಿಸೆಂಬರ್ ತನಕದ ವೇತನ ಬಿಡುಗಡೆಯಾಗಿದೆ. ಜನವರಿ ತಿಂಗಳ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಸಿಬ್ಬಂದಿ ವೇತನ ವಿಚಾರದಲ್ಲಿ ಆತಂಕ ಅನಗತ್ಯ ಇಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಲಾಕ್‌ಡೌನ್‌ನಿಂದ 2 ತಿಂಗಳು ಸಾರಿಗೆ ಸಂಚಾರ ಸ್ತಬ್ಧವಾಗಿತ್ತು. ಆದರೂ ಸರ್ಕಾರ ಸಾರಿಗೆ ನೌಕರರಿಗೆ 650 ಕೋಟಿ ರೂ.ವೇತನ ಪಾವತಿಸಿದೆ. ಸಾರಿಗೆ ಸಂಚಾರ ಆರಂಭ ಬಳಿಕ 7 ತಿಂಗಳ ವೇತನವನ್ನು ಸರ್ಕಾರ ಶೇ.75 ಹಾಗೂ ನಿಗಮ ಶೇ.25ರಂತೆ ನೀಡಲಾಗಿದೆ. ಇದುವರೆಗೆ 1,760 ಕೋಟಿ ರೂ.ವನ್ನು ಸರ್ಕಾರದಿಂದ ಪಡೆದು ಸಾರಿಗೆ ಸಿಬ್ಬಂದಿಗೆ ವೇತನ ನೀಡಲಾಗಿದೆ. ಡಿಸೆಂಬರ್‌ನಲ್ಲಿ ನಿಡಲಾದ ಅರ್ಧ ಸಂಬಳವನ್ನು 3-4 ದಿನಗಳಲ್ಲಿ ಭರ್ತಿಗೊಳಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಾರಿಗೆ ಸಿಬ್ಬಂದಿಯ 10 ಬೇಡಿಕೆಗಳ ಪೈಕಿ ಒಂಬತ್ತನ್ನೂ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕೆಎಸ್‌ಆರ್‌ಟಿಸಿಯ ನಾಲ್ಕು ನಿಗಮಗಳ ವಿಲೀನ ಪ್ರಸ್ತಾಪ ಇಲ್ಲ. ಗ್ರಾಮೀಣ ಸಾರಿಗೆಯ ನೌಕರರಿಗೆ ಓವರ್ ಟೈಮ್ ಭತ್ಯೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಭೇಟಿ: ರಾಜ್ಯದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪೈಕಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಗ್ರಸ್ಥಾನದಲ್ಲಿದೆ. ಅನೇಕ ಗ್ರಾಹಕರಿಗೆ ಆರ್ಥಿಕ ಸವಲತ್ತು ಒದಗಿಸಿ, ಲಕ್ಷಾಂತರ ಮಂದಿಯ ಕುಟುಂಬಕ್ಕೆ ಆಶ್ರಯ ನೀಡಿರುವುದು ಬ್ಯಾಂಕಿನ ಜನಪ್ರಿಯತೆಗೆ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಶನಿವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಠೇವಣಿ ಸಂಗ್ರಹದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಮೊದಲ ಸ್ಥಾನದಲ್ಲಿದ್ದು, ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬ್ಯಾಂಕಿನ ಏಳಿಗೆಗೆ ಅವಿರತ ದುಡಿಯುತ್ತಿದ್ದಾರೆ ಎಂದರು.
ಕರಾವಳಿಯ ಜನತೆ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ವಿಶ್ವಾಸವಿರಿಸಿದ್ದಾರೆ. ರಾಜೇಂದ್ರ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ನೆರವಾಗಲು ಇಥೆನಾಲ್ ಉದ್ದಿಮೆ ಸ್ಥಾಪಿಸಲು ನೆರವಾಗಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಕೂಡ ಕಬ್ಬು ಬೆಳೆಗಾರರಿಗೆ ಸಾಲದ ನೆರವು ನೀಡಲು ಮಹತ್ತರ ಪಾತ್ರ ವಹಿಸಿದೆ ಎಂದರು. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರ ಸಚಿವರಾಗಿ ಈ ಹಿಂದೆ ಸೇವೆ ಸಲ್ಲಿಸಿದ ಲಕ್ಷ್ಮಣ ಸವದಿ ಅವರು ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
4ಶಾಸಕ ಡಾ.ವೈ.ಭರತ್ ಶೆಟ್ಟಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಎಸ್.ರಾಜು ಪೂಜಾರಿ, ಬಿ.ನಿರಂಜನ್, ಎಂ.ವಾದಿರಾಜ ಶೆಟ್ಟಿ, ಎಸ್.ಬಿ.ಜಯರಾಮ ರೈ, ಎಂ.ಮಹೇಶ್ ಹೆಗ್ಡೆ, ಜೈರಾಜ್.ಬಿ.ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ.ಇದ್ದರು.