ಜಿಲ್ಲೆ

ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ದ; ಸಚಿವ ಮಂಕಾಳ ವೈದ್ಯ

Uttara Kannada - Subash Hegde

ಕಾರವಾರ:ಜಿಲ್ಲೆಯಲ್ಲಿರುವ ಎಲ್ಲಾ ವಿಕಲ ಚೇತನರು ತಮ್ಮ ದೈನಂದಿನ ಚಟುವಟಿಕೆಗಳನ್ನು
ಸುಗಮವಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣೆಗಳನ್ನು ಮತ್ತು ಪರಿಕರಗಳನ್ನು ವಿತರಿಸಲು ಸರ್ಕಾರ
ಬದ್ಧವಾಗಿದೆ ಎಂದು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತ್
ಸಹಯೋಗದಲ್ಲಿ ವಿಕಲ ಚೇತನರಿಗೆ ಸಾಧನ ಸಲಕರಣೆ, ಪರಿಕರ, ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ನ ಅನಿರ್ಬಂಧಿತ ಅನುದಾನದಡಿ 109.27 ಲಕ್ಷ
ಅನುದಾನದಲ್ಲಿ 80 ಯಂತ್ರ ಚಾಲಿತ ತ್ರಿ ಚಕ್ರವಾಹನ ಹಾಗೂ ಬ್ಯಾಟರಿ ಚಾಲಿತ ವಾಹನಗಳು ಸೇರಿದಂತೆ ವಿವಿಧ ಬಗೆಯ ಒಟ್ಟು 630
ಪರಿಕರಗಳನ್ನು ವಿತರಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಪರಿಕರಗಳ ಅಗತ್ಯವಿದ್ದರೆ ನೀಡಲಾಗುವುದು ಎಂದರು.
ವಿಕಲಚೇತನರಲ್ಲಿ ಎಲ್ಲರಂತೆ ಬದುಕುವ ಹಾಗೂ ವಿಶೇಷ ಸಾಧನೆಯ ಛಲ ಇದೆ. ಇದಕ್ಕೆ ಪೂರಕವಾಗಿ ಇಡೀ ಜಿಲ್ಲೆಯ ಎಲ್ಲ
ವಿಕಲ ಚೇತನರಿಗೆ ಅವಶ್ಯಕತೆ ಅನುಗುಣವಾಗಿ, ಅವರ ಬೇಡಿಕೆಯಂತೆ ಸಾಧನ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ್ ಸೈಲ್ ಮಾತನಾಡಿ, ವಿಕಲಚೇತನರ ನೋವು ಅರಿಯಲು ಸಾಧ್ಯವಿಲ್ಲ,
ಧೈರ್ಯವಾಗಿರಿ ಯಾವುದೇ ಸಂದರ್ಭದಲ್ಲಿ ಎದೆ ಗುಂದಬೇಡಿ, ನಿಮಗೆ ಅವಶ್ಯಕವಿರುವ ಎಲ್ಲಾ ಸಾಧನ ಸಲಕರಣೆಗಳನ್ನು ಒದಗಿಸಲು
ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ನಿಧಿಯಿಂದ ಅನುದಾನ ನೀಡುತ್ತೇವೆ ಎಂದರು.
ಇದೆ ಸಂದರ್ಭದಲ್ಲಿ ತುಳಸಿದಾಸ್ ಎಂಬ ವಿಕಲಚೇತನ ನನ್ನು ಸಚಿವರು ವೇದಿಕೆಗೆ ಆಹ್ವಾನಿಸಿ ತಮ್ಮ ಪಕ್ಕದಲ್ಲಿ ಕುಳ್ಳಿಸಿ
ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ.ಸಿ.ಇ.ಓ ಈಶ್ವರ ಕುಮಾರ
ಕಾಂದೂ ಮತ್ತಿತರರು ಉಪಸ್ಥಿತರಿದ್ದರು.