ಅಮೃತ ಸರೋವರ 
ಜಿಲ್ಲೆ

ಕೆರೆಯಂಗಳದಲ್ಲಿ ತ್ರಿವರ್ಣ ರಂಗು

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾದ ಹಿನ್ನೆಲೆಯಲ್ಲಿ ಅದನ್ನು ಸ್ಮರಣೀಯವಾಗಿಸಲು ಕೆರೆಗಳ ಸಮಗ್ರ ಅಭಿವೃದ್ಧಿಗೊಳಿಸುವ ಪರಿಕಲ್ಪನೆಯಲ್ಲಿ 75 ಕೆರೆಗಳನ್ನು ಅಭಿವೃದ್ಧಿಪಡಿಸಿ ಕೆರೆಗಳ ತಟದಲ್ಲಿ ಧ್ವಜಾರೋಹಣ ಕೈಗೊಳ್ಳಲಾಗಿತ್ತು. ಅದರಂತೆ ಈ ಬಾರಿಯೂ ಕೆರೆಯ ಅಂಗಳದಲ್ಲಿ ರಾಷ್ಟ್ರ ಬಾವುಟ ಹಾರಾಡಲಿದೆ ಎಂದು ಜಿಪಂ ಸಿಇಒ ಶಶಿಧರ ಕುರೇರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಈ ಬಾರಿ 126 ಅಮೃತ ಸರೋವರಗಳ ಬಳಿ ತಿರಂಗಾ ಹಾರಲಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬಸ್ಥರು, ಹಿರಿಯ ನಾಗರಿಕರಿಂದ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನ ಇನ್ನಷ್ಟು ಅರ್ಥಪೂರ್ಣ, ಸ್ಮರಣೀಯವಾಗಿಸಲು ತ್ಯಾಗ, ಬಲಿದಾನಗೈದ ವೀರರಿಗೆ ಕೃತಜ್ಞತೆ ಸಲ್ಲಿಸಲು ವೀರರಾಗಿರುವ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಆರಕ್ಷಕ ಸಿಬ್ಬಂದಿ ಹೆಸರು ಶಿಲಾಲಕದಲ್ಲಿ ಇರಲಿದೆ. ಅಲ್ಲದೆ ಬಸವಣ್ಣನವರ ವಚನ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಸಂದೇಶವೂ ಇರಲಿದೆ. ಅಮೃತ ಸರೋವರ ಬಳಿ ಶಿಲಾಲಕ ಅಳವಡಿಸಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ದಿನದಂದು ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮದ ಪ್ರಮುಖರು, ಸಂಘ- ಸಂಸ್ಥೆಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಗ್ರಾಮದಲ್ಲಿ ತಿರಂಗಯಾತ್ರೆ ಕೈಗೊಂಡು ಅಮೃತ ಸರೋವರ ಬಳಿ ಕೊನೆಗೊಳಿಸುವುದು. ಕೆರೆಯ ಸುತ್ತ ಮತ್ತು ನೀರಿನ ಸ್ವಚ್ಛತೆ ಕಾಪಾಡುವಂತೆ ಸ್ವಚ್ಛತಾ ಪ್ರತಿಜ್ಞೆ, ನೀರಿನ ಬಳಕೆ ಮತ್ತು ನಿರ್ವಹಣೆಗೆ ಬಳಕೆದಾರರ ಗುಂಪಿಗೆ ಪ್ರಮಾಣ ಪತ್ರ ವಿತರಣೆ, ಸಸಿಗಳ ನೆಡುವಿಕೆ, ಆರೈಕೆ ಮತ್ತು ಸುಸ್ಥಿರತೆಗಾಗಿ ವ್ಯಕ್ತಿಗಳ ನಾಮಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಮಿಷನ್ ಅಮೃತ ಸರೋವರ ಅಡಿಯಲ್ಲಿ ಉತ್ತಮ ಅಮೃತ ಸರೋವರ ನಿರ್ಮಿಸಿದ ಗ್ರಾಮ ಪಂಚಾಯಿತಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 75 ಔಷಧೀಯ ಗಿಡಗಳನ್ನು ನೆಡಲಾಗುತ್ತಿದೆ. ಜಿಲ್ಲೆಯ ಎಲ್ಲ ಅಮೃತ ಸರೋವರದ ಮಣ್ಣನ್ನು ಗಡಿಗೆಯಲ್ಲಿ (ಅಮೃತ ಕಲಶ) ಸಂಗ್ರಹಿಸಿ ನವದೆಹಲಿಗೆ ಕಳಿಸಲಾಗುತ್ತಿದೆ. ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ರಂಗೋಲಿ, ಪ್ರಬಂಧ ಸ್ಪರ್ಧೆ, ಭಾಷಣದಂತಹ ಸ್ಪರ್ಧಾತ್ಮಕ ಚಟುವಟಿಕೆ, ಖೋಖೋ, ಕಬಡ್ಡಿ ಸೇರಿ ವಿವಿಧ ಸಾಂಪ್ರದಾಯಿಕ ಕ್ರೀಡೆಗಳನ್ನು ಆಯೋಜಿಸಲಾಗುವುದೆಂದು ತಿಳಿಸಿದ್ದಾರೆ.

ಇಲಾಖೆ ನಿರ್ದೇಶನದಂತೆ ಅಮೃತ ಸರೋವರ ತಟದಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ವಿವಿಧ ಚಟುವಟಿಕೆ ಕೈಗೊಳ್ಳುವ ಮೂಲಕ ಸ್ವಾತಂತ್ರ್ಯದ ಸಂಭ್ರಮ ಇಮ್ಮಡಿಗೊಳಿಸಲಾಗುತ್ತಿದೆ. ಉತ್ತಮ ಅಮೃತ ಸರೋವರಗಳನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುವುದು.
ಶಶಿಧರ ಕುರೇರ, ಜಿಪಂ ಸಿಇಒ
ಅಮೃತ ಸರೋವರಗಳ ತಟದಲ್ಲಿ ಸ್ವಾತಂತ್ರೃ ಸಂಭ್ರಮ ಮನೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಲಕದಲ್ಲಿ ಬರೆದು ಅಮೃತ ಸರೋವರ ಬಳಿ ಪ್ರತಿಷ್ಠಾಪಿಸಲಾಗುತ್ತಿದೆ.
ಎನ್.ವೈ. ಬಸರಿಗಿಡದ, ಜಿಪಂ ಉಪಕಾರ್ಯದರ್ಶಿ