ಜಿಲ್ಲೆ

ತಾಯಿ ಚಾಮುಂಡೇಶ್ವರಿಗೆ ಜಯಘೋಷ, ಆಷಾಢ ಶುಕ್ರವಾರ ಪೂಜೆ ಸಂಪನ್ನ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಕಡೇ ಆಷಾಢ ಶುಕ್ರವಾರದ ವಿಶೇಷ ಪೂಜೆ ಅಪಾರ ಭಕ್ತಸಾಗರದ ನಡುವೆ ಸಂಪನ್ನಗೊಂಡಿತು. ಬಿಟ್ಟು, ಬಿಟ್ಟು ಬರುತ್ತಿದ್ದ ತುಂತುರು ಮಳೆ ನಡುವೆಯೇ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದರು.
ಮಧ್ಯರಾತ್ರಿಯಿಂದಲೇ ವಿವಿಧೆಡೆಗಳಿಂದ ಬೆಟ್ಟಕ್ಕೆ ಆಗಮಿಸಿದ ಭಕ್ತರು ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರು. ದೇವಸ್ಥಾನದ ಹೊರಗೆ ಮಳೆ ಸುರಿಯುತ್ತಿದ್ದರೆ, ದೇವಸ್ಥಾನದ ಒಳಗೆ ಸಾಲಿನಲ್ಲಿ ಜಯಘೋಷಗಳು ಮೊಳಗುತ್ತಿದ್ದವು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಂಬ, ಶಾಸಕರಾದ ಶಾಸಕ ಕೆ.ಹರೀಶ್‌ಗೌಡ, ಜಿ.ಡಿ.ಹರೀಶ್‌ಗೌಡ ಕುಟುಂಬ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ಅಧಿದೇವತೆಯ ದರ್ಶನ ಪಡೆದರು.
ಮುಂಜಾನೆಯಿಂದಲೇ ಪೂಜೆ: ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಬಳಿಕ ಬೆಳಗಿನ ಜಾವ 5.30ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30ರಿಂದ 7ರವರೆಗೆ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸಿಂಹವಾಹಿನಿ ಅಲಂಕಾರ:
ಕಳೆದ ಮೂರು ವಾರಗಳಂತೆ ದೇವಸ್ಥಾನ ವಿಶೇಷ ರೀತಿಯಲ್ಲಿ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿಗೆ ಈ ವಾರ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು.
ದೇವಾಲಯದ ಪ್ರವೇಶದ್ವಾರ, ಹೊರ ಆವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು. ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದರ್ಶನ ಪಡೆದು ಹೊರಬರುತ್ತಿದ್ದ ಭಕ್ತರಲ್ಲಿ ಧನ್ಯತಾಭಾವ ಮೂಡಿತ್ತು.

ಹರಕೆ ತೀರಿಸಿದರು:
ಬಹುತೇಕ ಭಕ್ತರು ನಗರ ಸಾರಿಗೆ ಬಸ್‌ನಲ್ಲಿ ಬಂದರೆ ಇನ್ನು ಕೆಲವರು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಆಗಮಿಸಿದರು. ಚಾಮುಂಡಿಬೆಟ್ಟದ ಪಾದದಿಂದ ಪ್ರತಿ ಮೆಟ್ಟಿಲಿಗೂ ಅರಿಶಿಣ, ಕುಂಕುಮ ಹೂಗಳನ್ನಿಟ್ಟು, ಕರ್ಪೂರ ಹಚ್ಚಿ ಭಕ್ತಿ ಭಾವದಿಂದ ಮೆಟ್ಟಿಲು ಹತ್ತಿ ಹರಕೆ ತೀರಿಸಿದರು.
ಕಳೆದ ವಾರಗಳಂತೆಯೇ ಬೆಟ್ಟಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7ರಿಂದ ಪ್ರಾರಂಭವಾದ ಪ್ರಸಾದ ವಿತರಣೆ ರಾತ್ರಿಯವರೆಗೂ ನಡೆಯಿತು.

ನಗರದೆಲ್ಲೆಡೆ ಪ್ರಸಾದ ವಿತರಣೆ
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳು, ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರ ಇರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ.ರಸ್ತೆ, ಕೆ.ಜಿ.ಕೊಪ್ಪಲು, ಒಂಟಿಕೊಪ್ಪಲು ಸೇರಿದಂತೆ ನಗರದ ಹಲವೆಡೆ ಪ್ರಸಾದ ವಿತರಣೆ ಮಾಡಲಾಯಿತು. ಸಾರ್ವಜನಿಕರು ಸಾಲಿನಲ್ಲಿ ಪ್ರಸಾದ ಸ್ವೀಕರಿಸಿದರು.

ಸುತ್ತೂರು ಮಠದಲ್ಲೂ
ಆಷಾಢ ಮಾಸದ ಕಡೆಯ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಹೋಗುವ ಸಾವಿರಾರು ಭಕ್ತರು ಮಠಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ವತಃ ತಾವೇ ಪ್ರಸಾದ ವಿತರಿಸಿದರು. ಆಷಾಢ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆಯಲ್ಲಿ ಪ್ರತಿವರ್ಷ ಮಠದಿಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ.

ವಿಐಪಿಗಳಿಂದ ಹೈರಾಣಾದ ಪೊಲೀಸರು
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಭಕ್ತರಿಗಿಂತ ವಿಐಪಿಗಳ ಹಾವಳಿಯೇ ಹೆಚ್ಚಾಗಿತ್ತು.
ಚಾಮುಂಡಿಬೆಟ್ಟಕ್ಕೆ ನಗರ ಸಾರಿಗೆ ಬಸ್‌ಗಳಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದು, ಖಾಸಗಿ ಕಾರು, ಇನ್ನಿತರ ವಾಹಗಳಿಗೆ ಕಡಿವಾಣ ಹಾಕಲಾಗಿತ್ತು. ಆದರೂ ಸಚಿವರು, ಶಾಸಕರ ಶಿಫಾರಸು ಪತ್ರ ತಂದಿದ್ದವರು ನೇರ ಪ್ರವೇಶಕ್ಕೆ ಮುಗಿಬಿದ್ದರು. ಕೆಲವರು ಪ್ರಭಾವ ಬಳಸಿ ಒಳಹೋಗಲು ಮುಂದಾದರು. ಒಂದೇ ಬಾರಿಗೆ ನೂರಾರು ಜನರು ಬಂದಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸುವಷ್ಟರಲ್ಲಿ ಹೈರಾಣಾದರು.
ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದು ಸಾಲಿನಲ್ಲಿ ನಿಂತಿದ್ದ ಭಕ್ತರು ವಿಐಪಿಗಳ ಹಾವಳಿಯಿಂದ ಬೇಸತ್ತು ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿದರು. ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದೇವೆ. ಮೊದಲು ನಮ್ಮನ್ನು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.