ಕಿಕ್ಕೇರಿ: ಶಿಷ್ಯರು ಸಾಧನೆ ಮಾಡಿ ತೋರಿಸಿದಾಗ ಮೊದಲು ಆನಂದಪಡುವವರು ಗುರುಗಳು ಎಂದು ನಿವೃತ್ತ ಮುಖ್ಯಶಿಕ್ಷಕ ಆನೆಗೊಳ ರಾಮೇಗೌಡ ತಿಳಿಸಿದರು.
ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯ 1992-93ನೇ ಸಾಲಿನ ಹಳೇ ವಿದ್ಯಾರ್ಥಿ ಬಳಗ ಭಾನುವಾರ ಏರ್ಪಡಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತನಗೆ 30 ವರ್ಷಗಳ ಹಳೆಯ ನೆನಪನ್ನು ಶಿಷ್ಯರು ಮಾಡಿಕೊಟ್ಟಿದ್ದಾರೆ. ಅಂದು ಗುರುಗಳ ಮೇಲಿದ್ದ ಭಯ, ಗೌರವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದೆ. ಬಡತನ, ಬದುಕು ಕಟ್ಟಿಕೊಳ್ಳುವ ತವಕದಿಂದ ಭಯ ಭಕ್ತಿಯಿಂದ ಓದುತ್ತಿದ್ದರು. ಹೊಡೆದರೆ ಮತ್ತಷ್ಟು ಹೊಡೆಯಿರಿ, ಮಕ್ಕಳು ಓದಲಿ ಎನ್ನುತ್ತಿದ್ದ ಅಂದಿನ ಪಾಲಕರು ಇಂದು ಇಲ್ಲವಾಗಿದ್ದಾರೆ ಎಂದರು.
ಕಷ್ಟಪಟ್ಟು ಕನ್ನಡ ಮಾಧ್ಯಮ ಪ್ರೌಢಶಾಲೆ ತಂದೆವು. ಖಾಸಗಿ ಶಾಲೆಗಳ ಆರ್ಭಟಕ್ಕೆ ಕನ್ನಡ ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕನ್ನಡ ಶಾಲೆ ಉಳಿಸಿ ಬೆಳೆಸಿದರೆ ಅದೇ ಶಿಷ್ಯರು ನಮಗೆ ನೀಡುವ ಗುರು ಕಾಣಿಕೆ ಎಂದರು.
ನಿವೃತ್ತ ಶಿಕ್ಷಕರು ಶಿಷ್ಯರಿಂದ ಗೌರವ ಸಮರ್ಪಣೆ ಸ್ವೀಕರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹಳೇ ವಿದ್ಯಾರ್ಥಿಗಳು ಗುರುಗಳೊಂದಿಗೆ ಇದ್ದ ಬಾಂಧವ್ಯ, ಭಯ ಎಲ್ಲವನ್ನೂ ಹಂಚಿಕೊಂಡು ಖುಷಿಪಟ್ಟರು.
ಪುಷ್ಪವೃಷ್ಟಿ ಮೂಲಕ ಗುರುಗಳನ್ನು ಶಿಷ್ಯರು ವೇದಿಕೆಗೆ ಸ್ವಾಗತಿಸಿದರು. ಗುರುಗಳ ಕುರಿತು ಕಾವ್ಯ ರಚಿಸಿ ಹಾಡಿ ಸಂಭ್ರಮಿಸಿದರು. ಫಲತಾಂಬೂಲ, ಮೈಸೂರು ಪೇಟ, ಹಾರ ತುರಾಯಿಗಳೊಂದಿಗೆ ಗುರುಗಳಿಗೆ ಗೌರವ ಸಮರ್ಪಿಸಿದರು.
ನಿವೃತ್ತ ಶಿಕ್ಷಕರಾದ ಎನ್.ರವೀಂದ್ರಕುಮಾರ್, ರಾಮೇಗೌಡ, ಕೆ.ಎಲ್.ಶಿವಲಿಂಗೇಗೌಡ, ಡಿ.ಜಯರಾಮ್, ತಿಮ್ಮೇಗೌಡ, ನರಸಿಂಹಮೂರ್ತಿ, ರಾಜು, ಜಯಣ್ಣ, ಮಂಜುನಾಥ್, ಬಾಲರಾಜು, ಉಮಾದೇವಿ ಸನ್ಮಾನಿತರಾದರು.
ಹಳೇಯ ವಿದ್ಯಾರ್ಥಿಗಳಾದ ದಿವಾಕರ್, ಸುರೇಶ್, ಕೆ.ಆರ್.ವೆಂಕಟೇಶ್, ಕೆ.ಎಲ್ ಕೃಷ್ಣೇಗೌಡ, ಜಗನ್ನಾಥ, ಯೋಗೇಶ್, ತಮ್ಮಯ್ಯ, ಮಧು, ಜ್ಯೋತಿ, ರಾಜಮ್ಮ ಮತ್ತಿತರರು ಹಾಜರಿದ್ದರು.