ಮುಧೋಳದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮರೆಗುದ್ದಿ ಡಾ. ನಿರೂಪಾಧೀಶ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು. ಕವಿವಿ ವಿಶ್ರಾಂತ ಕುಲಪತಿ ಪ್ರೋ. ಕೆ.ಬಿ. ಗುಡಸಿ, ಬಸವಲಿಂಗ ಮಹಾಸ್ವಾಮಿಗಳು, ಚಂದ್ರಶೇಖರ ಮಹಾಸ್ವಾಮಿಗಳು, ಸಾಹಿತಿ ಅಶೋಕ ನರೋಡೆ, ಶಿವಕುಮಾರ ಮಲಘಾಣ ಇತರರಿದ್ದರು. 
ಜಿಲ್ಲೆ

ಶ್ರೀ ನಿರುಪಾಧೀಶರ ಸಾಹಿತ್ಯ ಕೃಷಿಗೆ ಸಂದ ಗೌರವ

ಮುಧೋಳ: ಶೈಕ್ಷಣಿಕ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಯಾರಿಗೂ ಗೌರವ ಡಾಕ್ಟರೇಟ್ ಪದವಿ ನೀಡುವುದಿಲ್ಲ. ಸಾಧಕರ ಸಾಧನೆ ಅವರತ್ತ ಈ ಪದವಿ ಒಲಿದು ಬರುವಂತೆ ಮಾಡುತ್ತದೆ ಎಂದು ಧಾರವಾಡದ ವಿಶ್ರಾಂತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.

ಧಾರವಾಡದಲ್ಲಿ ಭಾನುವಾರ ಕರ್ನಾಟಕ ವಿಶ್ವವಿದ್ಯಾಲಯ ಮರೆಗುದ್ದಿ ಅಡವಿಸಿದ್ಧೇಶ್ವರ ಮಠದ ಶ್ರೀ ನಿರುಪಾಧೀಶ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ನೀಡಿದ ಪ್ರಯುಕ್ತ ಶ್ರೀ ನಿರುಪಾಧೀಶ ಭಕ್ತ ಸಮೂಹ ನಗರದ ಹೇಮರಡ್ಡಿ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಷ್ಟ, ಕಾರ್ಪಣ್ಯಗಳ ಮಧ್ಯೆ ಜೋಳಿಗೆ ಹಿಡಿದು ಮನೆಗಳಿಗೆ ತೆರಳಿ ಮಠ ಕಟ್ಟಿ ಆಯುರ್ವೇದ, ಗಿಡಮೂಲಿಕೆಗಳ ಕುರಿತು ಸಮಾಜಕ್ಕೆ ವಿಷಯ ಮುಟ್ಟಿಸುತ್ತ ಮಹಾಗ್ರಂಥ ಹೊರತಂದು ಸಮಾಜಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ. ಮಹಾವಿದ್ಯಾಲಯ, ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಮಾಡುವ ಕಾರ್ಯವನ್ನು ನಿರುಪಾಧೀಶ ಶ್ರೀಗಳು ಮಾಡಿದ್ದಾರೆ. ಶ್ರೀಗಳಿಗೆ ಡಾಕ್ಟರೇಟ್ ಗೌರವ ನೀಡಿದ್ದು ಹೆಮ್ಮೆ ಎನಿಸುತ್ತದೆ ಎಂದರು.
ಕೆಎಲ್‌ಇ ಪದವಿ ಕಾಲೇಜಿನ ಪ್ರಾಧ್ಯಾಪಕ, ಸಾಹಿತಿ ಅಶೋಕ ನರೋಡೆ ಉಪನ್ಯಾಸ ಮಾತನಾಡಿ, ಗಿಡಮೂಲಿಕೆಯೊಂದಿಗೆ ಭಕ್ತರ ಆರೋಗ್ಯದ ಕಾಳಜಿ ಜತೆಗೆ ನೂರಕ್ಕೂ ಅಧಿಕ ಗ್ರಂಥ ಹಾಗೂ ಮಹಾಗ್ರಂಥಗಳನ್ನು ಹೊರ ತಂದ ಸರಳ ವ್ಯಕ್ತಿತ್ವದ ಮಹಾನ್ ಚೇತನ ಡಾ. ನಿರುಪಾಧೀಶರು. ಶ್ರೀಗಳು ರಚಿಸಿದ ಮಹಾಗ್ರಂಥಗಳ ಮೇಲೆ ಹಲವರು ಪಿಎಚ್‌ಡಿ ಮಾಡುತ್ತಿದ್ದು, ಇವರ ಸಾಹಿತ್ಯವೆಲ್ಲವೂ ಸಂಶೋಧನಾ ವಿನ್ಯಾಸದಲ್ಲಿ ರಚಿತವಾಗಿದೆ. ಆಧುನಿಕ ಮಹಾಕಾವ್ಯ ರಚನೆಯಲ್ಲಿ ಶ್ರೀಗಳ ಹೆಸರು ಮುಂಚೂಣಿಯಲ್ಲಿದೆ ಎಂದರು.

ಓಲೇಮಠದ ಡಾ. ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ದೇವರ ಸೇವೆಯ ಜತೆಗೆ ಜನಸೇವೆಯೂ ನನ್ನ ಕರ್ತವ್ಯ ಎಂದು ಬದುಕಿ ಆದರ್ಶಪ್ರಾಯವಾದ ಶ್ರೀ ನಿರುಪಾಧೀಶ ಶ್ರೀಗಳ ಸೇವೆ ಶ್ಲಾಘನೀಯ ಎಂದರು.
ಮುಧೋಳ ಗವಿಮಠ-ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿದರು.

ಬೇರೆ ಜಿಲ್ಲೆ ಹಾಗೂ ನಮ್ಮ ಜಿಲ್ಲೆಯ ಜಾನಮಟ್ಟಿ, ಆಲಗುಂಡಿ ಬಿ.ಕೆ. ವಜ್ರಮಟ್ಟಿ, ಕುಳಲಿ, ಮರೆಗುದ್ದಿ ಸೇರಿ ವಿವಿಧ ಗ್ರಾಮಗಳ ಹಾಗೂ ನಗರದ ನೂರಾರು ಭಕ್ತರು, ಸಂಘಸಂಸ್ಥೆಗಳು ನಿರುಪಾಧೀಶ ಶ್ರೀಗಳನ್ನು ಸನ್ಮಾನಿಸಿದವು.
ಯಡಹಳ್ಳಿಯ ಅಡವಿಸಿದ್ಧೇಶ್ವರಮಠದ ಚಂದ್ರಶೇಖರ ಮಹಾಸ್ವಾಮಿಗಳು, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಶ್ರೀ ಹೇಮರಡ್ಡಿ ಮಲ್ಲಮ್ಮ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ, ಹನುಮಂತಗೌಡ ಪಾಟೀಲ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ನಿವೃತ್ತ ಡಿಡಿಪಿಐ ಎಂ.ಜಿ. ದಾಸರ, ಅಪ್ಪಣಗೌಡ ಪಾಟೀಲ, ಶಿವಾನಂದ ವಾಡಕರ, ಡಾ. ಸಿದ್ದು ದಿವಾಣ, ಡಾ. ಸತೀಶ ಮಲಘಾಣ, ಮಲ್ಲಪ್ಪಣ್ಣ ದೊಡಮನಿ, ಸುಭಾಸ ಕೋರಡ್ಡಿ, ವೆಂಕಟೇಶ ಬರಗಿ ಇತರರಿದ್ದರು.