ಮಂಡ್ಯ: ಭಾರತೀಯ ಸೈನ್ಯದಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ತಾಲೂಕಿನ ಡಣಾಯಕನಪುರ ಗ್ರಾಮದ ಡಿ.ಎಸ್.ದೇವರಾಜು ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸ್ವಗ್ರಾಮಕ್ಕೆ ಮರಳಿದ ಡಿ.ಎಸ್.ದೇವರಾಜು ಅವರನ್ನು ಮಂಡ್ಯ ನಗರದಿಂದ ಡಣಾಯಂಕನಪುರ ಗ್ರಾಮದವರೆಗೂ ಬೆಳ್ಳಿರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ತಳಿರು ತೋರಣಗಳಿಂದ ಗ್ರಾಮವನ್ನು ಸಿಂಗಾರಗೊಳಿಸಲಾಗಿತ್ತು. ಯುವಕರು ಪಟಾಕಿ ಸಿಡಿಸಿ, ಡೊಳ್ಳು ನಗಾರಿಗಳೊಂದಿಗೆ, ವಿವಿಧ ಹೂಮಾಲೆಗಳನ್ನು ಹಾಕಿ ಸ್ವಗ್ರಾಮಕ್ಕೆ ಬರಮಾಡಿಕೊಂಡರು.
ಈ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಳಗೆರೆಹಳ್ಳಿ ವಿ.ಸಿ.ಉಮಾಶಂಕರ ಮಾತನಾಡಿ, ಸೈನಿಕರು ಗಡಿ ಕಾಯುವ ಮೂಲಕ ದೇಶವನ್ನು ರಕ್ಷಣೆ ಮಾಡಿ ನಾಗರಿಕರಿಗೆ ನೆಮ್ಮದಿಯ ಜೀವನ ಒದಗಿಸಿದ್ದಾರೆ. ಅವರ ಕಾರ್ಯವೈಖರಿಯನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಜನಿಸಿದ ಗ್ರಾಮ, ಕುಟುಂಬ, ಆರೋಗ್ಯವನ್ನು ಲೆಕ್ಕಿಸದೆ ಅತೀವ ಸಂಕಷ್ಟದ ಪರಿಸ್ಥಿತಿಯಲ್ಲಿ ಸೈನಿಕರು ದೇಶವನ್ನು ರಕ್ಷಣೆ ಮಾಡುವ ಮೂಲಕ ಭಾರತದ ನಾಗರಿಕರಿಗೆ ಭದ್ರತೆಯನ್ನು ಒದಗಿಸಿದ್ದಾರೆ. ಸೈನಿಕರನ್ನು ಗೌರವಿಸುವ ಕೆಲಸವಾದರೆ ನಮ್ಮ ಜೀವನಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿರುವ ಡಿ.ಎಸ್.ದೇವರಾಜು ಅವರು ಜಮ್ಮು ಕಾಶ್ಮೀರ, ರಾಜಸ್ಥಾನ್, ಬಿಹಾರ್ ಹಾಗೂ ಗುಜರಾತ್‌ನಲ್ಲಿ 22 ವರ್ಷ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಈಗ ಸ್ವಗ್ರಾಮಕ್ಕೆ ಮರಳಿದ್ದಾರೆ. ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದು, ಯುವಕರು ಸೈನ್ಯ ಸೇರುವ ಮೂಲಕ ದೇಶವನ್ನು ಕಾಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಿವೃತ ಸೈನಿಕ ವಳಗೆರೆಹಳ್ಳಿ ವಿ.ಡಿ.ಶ್ರೀನಿವಾಸ್ ಮಾತನಾಡಿ, ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಅತ್ಯಂತ ಆತ್ಮತೃಪ್ತಿಯ ಕೆಲಸವಾಗಿದೆ. ಈ ದೇಶಕ್ಕೆ ಮತ್ತು ನಾಡಿಗೆ ನಿಜವಾದ ಕೊಡುಗೆ ಕೊಡುವುದಾದರೆ ಅದು ಸೈನಿಕ ವೃತ್ತಿಯಿಂದ ಮಾತ್ರ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಭಾರತೀಯ ಸೈನ್ಯ ಸೇರುವುದಕ್ಕೆ ಯುವಕರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿ. ಆದ್ದರಿಂದ ಮುಂದಿನ ದಿನಗಳಲ್ಲಿ ಯುವಕರು ಸೈನ್ಯ ಸೇರುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಡಿ.ಎಸ್.ದೇವರಾಜು, ನಾಡಿನ ಋಣ, ತಾಯಿ ಋಣ, ದೇಶದ ಋಣ ತೀರಿಸಲು ಎಷ್ಟು ಜನ್ಮವೆತ್ತಿದರೂ ಸಾಲದು. ನಾನು 22 ವರ್ಷ ದೇಶ ಸೇವೆ ಮಾಡಿದ್ದು, ಅದ್ಭುತ ಅನುಭವ ನೀಡಿದೆ. ದೇಶಕ್ಕಾಗಿ ಏನಾದರು ಮಾಡಬೇಕು ಎಂಬ ಕಿಚ್ಚು ನನ್ನ ಬಾಲ್ಯದಲ್ಲಿ ಹೊತ್ತಿತ್ತು ಅದು ಈಗ ಸಾಕಾರವಾಗಿದೆ. ಭಾರತದಲ್ಲಿ ಸೈನಿಕರಿಗೆ ತಮ್ಮದೇ ಆದ ಇತಿಹಾಸವಿದೆ ಎಂದು ಸ್ಮರಿಸಿದರು.
ರೈತ ಸಂಘದ ಮುಖಂಡರಾದ ಸೋ.ಸಿ.ಪ್ರಕಾಶ್, ಪ್ರಭುಲಿಂಗ, ಸೈನಿಕ ನಂದೀಶ, ಮುಖಂಡರಾದ ದೊಡ್ಡಲಿಂಗೇಗೌಡ, ವಿದ್ಯಾಧರ, ಧನಂಜಯ, ಜಯರಾಮು, ಶಂಕರ್ ರಾಜು, ಬೋರಯ್ಯ ಇದ್ದರು.