ಮಂಡ್ಯ: ಸಂಗೀತ ಕ್ಷೇತ್ರದ ದಿಗ್ಗಜ ಸರೋದ್ ವಾದಕ ಪ್ರೊ.ರಾಜೀವ್ ತಾರಾನಾಥ ಬೆಳೆದು ಬಂದ ಹಾದಿಯೇ ಒಂದು ಕೌತುಕ ಎಂದು ಕೆ.ಟಿ.ಹನುಮಂತು ಹೇಳಿದರು.
ನಗರದ ರೆಡ್‌ಕ್ರಾಸ್ ಭವನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಮಂಡ್ಯ ಸಹಯೋಗದಲ್ಲಿ ಆಯೋಜಿಸಿದ್ದ ಸರೋದ್ ವಾದಕ ಪ್ರೊ. ರಾಜೀವ್ ತಾರಾನಾಥ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿನಿಮಾ ಸಂಗೀತ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೃಷಿ ಮಾಡಿದ್ದು, ಕನ್ನಡ ಸಿನಿಮಾಗಳಾದ ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಅನುರೂಪ, ಪೇಪರ್ ಬೋಟ್ಸ್, ಶೃಂಗಾರ ಮಾಸ, ಆಗುಂತಕ ಮತ್ತು ಮಲಯಾಳಂನಲ್ಲಿ ಕಡವು, ಪೊಕ್ಕುವೇಯಿಲ್, ಕಾಂಚನಸೀತೆ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿ, ಪುರಸ್ಕಾರಗಳನ್ನು ಪಡೆದಿದ್ದರು ಎಂದು ಹೇಳಿದರು.
ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿಶ್ವಶ್ರೇಷ್ಠ ಸರೋದ್‌ವಾದಕರಲ್ಲಿ ಒಬ್ಬರಾಗಿದ್ದ ರಾಜೀವ್ ತಾರಾನಾಥ್ 1932ರ ಅ.17ರಂದು ಜನಿಸಿದ್ದರು. ಮೈಸೂರಿನಲ್ಲೇ ವಾಸವಿದ್ದರು. ಇವರ ಸರೋದ್‌ವಾದನಕ್ಕೆ ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾದರ ನಷ್ಟವಾಗಿದೆ ಎಂದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ರಾಜೀವ್ ತಾರಾನಾಥ್ ಅವರು 9ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದರು. ಕೋಲ್ಕತಾದ ಪಂಡಿತ್ ಅಲಿ ಅಕ್ಬರ್ ಖಾನ್ ಅವರಿಂದಾಗಿ ಸರೋದ್ ವಾದನದತ್ತ ಆಕರ್ಷಿತರಾದರು. ಅಕ್ಬರ್‌ಖಾನ್ ಅವರ ಶಿಷ್ಯರಾಗಿ ಶಿಕ್ಷಣ ಪಡೆದ ಅವರು ಖ್ಯಾತ ಸರೋದ್ ವಾದಕರಾಗಿ ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಹೆಸರುಗಳಿಸಿದವರು ಎಂದು ಹೇಳಿದರು.
2023ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಅರಮನೆ ಆಂಗಳದಲ್ಲಿ ಕಾರ್ಯಕ್ರಮ ನೀಡಿ ಸರೋದ್ ವಾದನಲ್ಲಿ ನಾದಮೇಳದ ಮೋಡಿಯನ್ನೇ ಮಾಡಿದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ಕರ್ನಾಟಕ ಸರ್ಕಾರದ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (1998) ಮತ್ತು ಗಾಯನ ಸಮಾಜದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದರು ಎಂದು ಸ್ಮರಿಸಿದರು.
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್, ಡ್ಯಾಪೋಡಿಲ್ಸ್ ಸಂಸ್ಥೆಯ ಸುಜಾತಾಕೃಷ್ಣ, ರಂಗಸ್ವಾಮಿ, ಉಪನ್ಯಾಸಕ ಮುತ್ತಗೆರೆ ಮಂಜು, ಲೋಕೇಶ್, ಕೀಲಾರ ಕೃಷ್ಣೆಗೌಡ, ಕೆಂಪರಾಜು ಇತರರಿದ್ದರು.