ಜಿಲ್ಲೆ

ಡಾ.ಪುನೀತ್‌ರಾಜ್‌ಕುಮಾರ್ ಅಗಲಿ ಮೂರು ವರ್ಷ: ಅಭಿಮಾನಿಗಳಿಂದ ಪುಣ್ಯಸ್ಮರಣೆ ಆಚರಣೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದಿವಂಗತ ನಟ ಡಾ.ಪುನೀತ್‌ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಗರದಲ್ಲಿ ಆಯೋಜಿಸಲಾಗಿತ್ತು.

ಮಹಾವೀರ ವೃತ್ತದಲ್ಲಿ ಕಾಮಧೇನು ರಮೇಶ್ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳು, ಭಾವಚಿತ್ರಕ್ಕೆ ವಿಶೇಷ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಿ ನಂತರ ತಿಂಡಿ, ಸಿಹಿ ತಿನಿಸುಗಳ ಎಡೆ ಇಟ್ಟು ಪ್ರಾರ್ಥಿಸಿದರು. ನೆರೆದಿದ್ದ ನೂರಾರು ಅಭಿಮಾನಿಗಳಿಗೆ ಅನ್ನದಾಸೋಹ ಮಾಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಂಕರೇಗೌಡ ಮಾತನಾಡಿ, ಪುನೀತ್‌ರಾಜ್‌ಕುಮಾರ್ ಮಾಡಿದ ಸಮಾಜಮುಖಿ ಸೇವೆ ಅವರು ಬದುಕಿದ್ದಾಗ ಯಾರಿಗೂ ತಿಳಿಯಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಅಪ್ಪು ನೋಡಿಕೊಂಡಿದ್ದರು. ಭಾರತೀಯ ಚಿತ್ರರಂಗದ ನಟಸಾರ್ವಭೌಮ ಡಾ.ರಾಜಕುಮಾರ್ ಆದರ್ಶದ ಹಾದಿಯಲ್ಲಿ ಹೆಜ್ಜೆ ಹಾಕಿದ ಪುನೀತ್‌ರಾಜ್‌ಕುಮಾರ್ ಆಗಲಿ ಮೂರು ವರ್ಷವಾಗಿದೆ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪುನೀತ್ ಎಂದಾಕ್ಷಣ ಎಲ್ಲರ ಕಣ್ಣಿನ ಎಂದು ಅವರ ನಗು ಬರುತ್ತದೆ. ಸಿನಿಮಾ ಮತ್ತು ಸಮಾಜ ಸೇವೆ ಮೂಲಕ ಅವರ ನೆನಪು ಸದಾ ಜೀವಂತವಾಗಿರುತ್ತದೆ ಎಂದು ಸ್ಮರಿಸಿದರು.

ಅಭಿಮಾನಿಗಳಾದ ನಟರಾಜು, ರವಿ, ಬೋರೇಗೌಡ, ಚಂದ್ರು, ನಾರಾಯಣ್, ಮಹೇಶ್, ಅಭಿಷೇಕ್, ಅಶೋಕ್ ಇತರರಿದ್ದರು.