ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಜೇನು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ, ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಜೇನು ಕೃಷಿಕ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರ್ದೆ ಗ್ರಾಮದ ಅರಂಬ್ಯ ನಿವಾಸಿ ಮನಮೋಹನ್ ಅವರ ಮನೆಗೆ ಗುರುವಾರ ಶಾಸಕ ಅಶೋಕ್‌ಕುಮಾರ್ ರೈ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿ, ಮನಮೋಹನ್ ಅವರು ಜೇನು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ ಎಂದು ಅನೇಕರು ನನ್ನ ಬಳಿ ಹೇಳಿಕೊಂಡಿದ್ದರು. ಜೇನು ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿರುವ ಅವರು ಅನೇಕ ಮಂದಿಗೆ ಜೇನು ಕೃಷಿ ತರಬೇತಿ ನೀಡಿರುವುದಲ್ಲದೆ ಹಲವಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಅವರ ಸಾಧನೆಯನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಅವರ ಮನೆಗೆ ಬಂದು ಸನ್ಮಾನ ಮಾಡಿದ್ದೇನೆ ಎಂದರು.
ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ, ನಮ್ಮೂರಿನ ಮನಮೋಹನ್ ಜೇನು ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿದ್ದು ,ಅನೇಕ ಮಂದಿಗೆ ಉದ್ಯೋಗ ಕೊಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಜೇನಿಗೆ ಬೇಡಿಕೆ ಇದ್ದು ಜೇನು ತುಪ್ಪದ ಜತೆಗೆ ಜೇನಿನ ವಿವಿಧ ಉತ್ಪನ್ನಗಳನ್ನು ಪರಿಚಯ ಮಾಡುವ ಮೂಲಕ ಜೇನು ಪ್ರಪಂಚವನ್ನೇ ಸೃಷ್ಟಿಸಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ದಯಾನಂದ ರೈ ಕೊರ್ಮಂಡ, ಗ್ರಾಪಂ ಸದಸ್ಯ ಮೊಯಿದುಕುಂಞಿ, ಸುಮಲತಾ, ಅಬೂಬಕ್ಕರ್ ಕೊರಿಂಗಿಲ, ಸದಾಶಿವ ರೈ ಚೆಲ್ಯಡ್ಕ, ಕಾರ್ತಿಕ್ ಉಪ್ಪಳಿಗೆ, ಪ್ರವೀಣ್ ರೈ ಪಂಜೊಟ್ಟು ಮತ್ತಿತರರು ಇದ್ದರು.
ಚಿಕ್ಕ ಪ್ರಾಯದಲ್ಲೇ ಜೇನು ಕೃಷಿ ಪ್ರಾರಂಭಿಸಿರುವ ಮನಮೋಹನ್ ಅವರು ಇಂದು ಸುಮಾರು 4000 ಕ್ಕೂ ಮಿಕ್ಕಿ ಜೇನು ಪೆಟ್ಟಿಗೆಗಳ ಒಡೆಯನಾಗಿದ್ದಾರೆ. ಹಲವಾರು ಮಂದಿಗೆ ತರಬೇತಿ ನೀಡಿ ಜೇನು ಕೃಷಿ ಸ್ವಉದ್ಯೋಗ ಮಾಡಲು ಪ್ರೇರೇಪಿಸಿರುವ ಅವರು ಅನೇಕ ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ - ಕೃಷ್ಣಪ್ರಸಾದ್ ಆಳ್ವ, ಭೂನ್ಯಾಯ ಮಂಡಳಿ ಸದಸ್ಯ https://www.vijayavani.net/lorry-overturns-in-vamanjur-driver-escapes-with-life