ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ ಪ್ರೊ.ಎನ್.ಜಿ.ಪಟವರ್ಧನ್‌ಗೆ ನುಡಿನಮನ ನಡೆಯಿತು. ಡಾ.ಬಿ.ಎ.ಕುಮಾರ ಹೆಗ್ಡೆ, ಡಾ.ಎಂ.ಪಿ.ಶ್ರೀನಾಥ್ ಮೊದಲಾದವರಿದ್ದರು. 
ಜಿಲ್ಲೆ

ಕಾಲೇಜಿನ ಜೀವದ್ರವ್ಯದಂತಿದ್ದವರು ಪಟವರ್ಧನ್ : ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಸ್ಮರಣೆ

ಸೌಮ್ಯ ಆರ್

ಬೆಳ್ತಂಗಡಿ: ಉಜಿರೆಯ ಶ್ರೀ ಧ.ಮಂ.ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಪ್ರೊ. ಎನ್.ಜಿ.ಪಟವರ್ಧನ್ ಅವರಿಗೆ ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳಂತೆ ಪ್ರಾಧ್ಯಾಪಕರು ಕೂಡ ಕಾಲೇಜಿನ ಜೀವದ್ರವ್ಯಗಳು. ಎನ್.ಜಿ.ಪಟವರ್ಧನ್ ಕೂಡ ಪ್ರಾಧ್ಯಾಪಕರಾಗಿ ಅದರಂತೆಯೇ ನಡೆದುಕೊಂಡವರು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ, ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ, ಎನ್.ಜಿ.ಪಟವರ್ಧನ್ 30 ವರ್ಷ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಚಿಂತನೆ ಹುಟ್ಟುಹಾಕಿದ್ದಾರೆ ಎಂದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯದುಪತಿ ಗೌಡ ಮಾತನಾಡಿ, ಎನ್.ಜಿ.ಪಟವರ್ಧನ್ ಮೇರು ವ್ಯಕ್ತಿತ್ವದವರು. ಹಲವಾರು ಕೃತಿಗಳನ್ನು ಬರೆದಿದ್ದಾರೆ. ಹುಟ್ಟು ಸಾವಿನ ಮಧ್ಯೆ ಅವರ ಸಾಧನೆಯ ನೆನಪೇ ಚಿರನೂತನ ಎಂದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.