ಧಾರವಾಡ: ಪಂಡಿತ ರಾಜೀವ್ ತಾರಾನಾಥರು ಭಾರತೀಯ ಸಂಗೀತ ಲೋಕದ ಮಾಂತ್ರಿಕ. ನೇರ, ನಿಷ್ಠುರರಾಗಿದ್ದ ಅವರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು ಎಂದು ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಹೇಳಿದರು.
ನಗರದ ಮನೋಹರ ಗ್ರಂಥಮಾಲಾದಲ್ಲಿ ಗುರುವಾರ ಆಯೊಜಿಸಿದ್ದ ಹಿರಿಯ ಸರೋದ್ ಕಲಾವಿದ ಪಂ. ರಾಜೀವ್ ತಾರಾನಾಥ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಲೇಖಕ ಜಿ.ಸಿ. ತಲ್ಲೂರ ಮಾತನಾಡಿ, ಇಂಥ ಕಲಾವಿದರು ಅಪರೂಪ. ಸಂಗೀತದಲ್ಲಿನ ಶುದ್ಧತೆ, ಪ್ರಮಾಣ ಬದ್ಧತೆ, ಸಂಸ್ಕೃತಿ, ಸಂಸ್ಕಾರವನ್ನು ತೋರಿಸಿದವರು ಪಂ. ತಾರನಾಥ ಎಂದರು.
ರಮಾಕಾಂತ ಜೋಶಿ ಮಾತನಾಡಿ, ತಾರಾನಾಥ ಅತ್ಯುತ್ತಮ ವಿಮರ್ಶಕರೂ ಆಗಿದ್ದರು. ಸಾಹಿತ್ಯದಿಂದ ವಿಮುಖರಾಗಿ ಸಂಪೂರ್ಣ ಸಂಗೀತದತ್ತ ವಾಲಿ ಭಾರತದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾದರು ಎಂದರು.
ಶ್ಯಾಮಸುಂದರ ಬಿದರಕುಂದಿ, ವಿ.ಟಿ. ನಾಯಕ, ಶಂಕರ ಕುಂಬಿ, ಪ್ರಕಾಶ ಗರುಡ, ಶ್ರೀನಿವಾಸ ವಾಡಪ್ಪಿ, ಕೃಷ್ಣಾ ಕಟ್ಟಿ, ಶಶಿಧರ ನರೇಂದ್ರ, ಅರಣ್ಯಕುಮಾರ, ಜಯಂತ, ವೀರಣ್ಣ ಪತ್ತಾರ, ಸುಜಾತಾ ಗುರವ, ಅಶೋಕ ಮೊಕಾಶಿ, ಸಮೀರ ಜೋಶಿ, ಇತರರಿದ್ದರು.
ಹ.ವೆಂ. ಕಾಖಂಡಿಕಿ ನಿರ್ವಹಿಸಿದರು.