ಜಿಲ್ಲೆ

ನಮೋ ಬ್ರಿಗೇಡ್‌ನಿಂದ ಕರಸೇವಕರಿಗೆ ಸನ್ಮಾನ

ಕುಮಟಾ: ಪಟ್ಟಣದ ಚಿತ್ರಗಿಯ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಗೆ ಕರಸೇವಕರಾಗಿ ಹೋಗಿ ಹೋರಾಟದಲ್ಲಿ ಭಾಗವಹಿಸಿದ್ದ ತಾಲೂಕಿನ ಕೋಡ್ಕಣಿಯ ಮಹಾದೇವ ಪಟಗಾರ, ಅನಂತ ಶಾನಭಾಗ, ತಲಗೇರಿಯ ನಾರಾಯಣ ಗೌಡ, ಮಹೇಶ ಗುನಗಾ ಅವರನ್ನು ನಮೋ ಬ್ರಿಗೇಡ್ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.

ಕರಸೇವಕ ನಾರಾಯಣ ಗೌಡ ಮಾತನಾಡಿ, ಅಯೋಧ್ಯಾ ನೂತನ ಮಂದಿರಕ್ಕಾಗಿ ಶ್ರೀರಾಮನ ಮೂರ್ತಿಯನ್ನು ಕರ್ನಾಟಕದ ಕಲಾವಿದರೆ ಕೆತ್ತಿರುವುದು ಹೆಮ್ಮೆ ಮತ್ತು ಸೌಭಾಗ್ಯ. ನಮ್ಮನ್ನು ಗುರುತಿಸುವವರೇ ಇಲ್ಲದ ಈ ದಿನಗಳಲ್ಲಿ ನಮೋ ಬ್ರಿಗೇಡ್ ತಂಡ ಗೌರವಿಸಿದ್ದು ಸಂತೋಷ ತಂದಿದೆ. ನಮ್ಮ ಜೀವಿತ ಕಾಲದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಆಗಿರುವುದು ಎಲ್ಲಿಲ್ಲದ ಧನ್ಯತೆ ಕೊಟ್ಟಿದೆ ಎಂದರು.

ಮಹೇಶ ಗುನಗಾ ಮಾತನಾಡಿ, ನಮ್ಮ ಮನೆಯಲ್ಲಿ ಮೂರು ಜನ ಮಕ್ಕಳಿದ್ದರಿಂದ ಕರಸೇವೆಗೆ ಹೋಗಲು ಯಾವುದೇ ನಿರ್ಬಂಧವಿಲ್ಲ ಎಂದು ಮನೆ ಮಂದಿ ಆ ದಿನಗಳಲ್ಲಿ ನನ್ನನ್ನು ಹುರಿದುಂಬಿಸಿ ಕರಸೇವೆಗೆ ಕಳುಹಿಸಿಕೊಟ್ಟಿದ್ದರು ಎಂದರು.

ಮಹಾದೇವ ಪಟಗಾರ ಮಾತನಾಡಿ, ಕರಸೇವಕರಾಗಿ ಹೋಗುವಾಗ ಹಲವರು ಸಹಾಯ ಮಾಡಿದ್ದರು. ರೈಲಿನಲ್ಲಿ ಆಹಾರ ನೀಡುತ್ತ ಹಿಂದುಗಳು ನಮಗೆ ಸಹಾಯ ಮಾಡುತ್ತಿದ್ದರು ಎಂದು ಅನುಭವ ಹಂಚಿಕೊಂಡರು.

ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ, ತಾಲೂಕು ಸಂಚಾಲಕ ಸಂದೀಪ ಮಡಿವಾಳ, ಸದಸ್ಯರಾದ ರವೀಶ ನಾಯ್ಕ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ ಹಾಗೂ ಸನ್ಮಾನಿತ ಕರಸೇವಕರ ಕುಟುಂಬದವರು ಇದ್ದರು.