ಶಿಕಾರಿಪುರ: ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಸೆ.6ರಂದು ಸನ್ಮಾನಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.
ಬೆಳಗ್ಗೆ 11ಕ್ಕೆ ಶಿಶುವಿಹಾರ ರಸ್ತೆಯಲ್ಲಿ ನೂತನ ಕಾಂಗ್ರೆಸ್ ಕಚೇರಿ ಲೋಕಾರ್ಪಣೆ ಗೊಳಿಸಲಾಗುವದು. ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ್, ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ಸದಸ್ಯ ನಗರದ ಮಹದೇವಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು. ಇದೇ ವೇಳೆ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸೆ.30ರಂದು ಗೃಹಲಕ್ಷ್ಮೀ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ, ಫಲಾನುಭವಿಗಳ ಜತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ 59,162 ಫಲಾನುಭವಿಗಳಿಗೆ 10.23 ಕೋಟಿ ರೂ. ಜಮೆ ಆಗಲಿದೆ ಎಂದು ತಿಳಿಸಿದರು.
ಶಿಕಾರಿಪುರದ ತಾಪಂ ಸಭಾಂಗಣ, ಪುರಸಭೆ ಸಭಾಂಗಣ, ಗಗ್ರಿ ಐಟಿಐ ಕಾಲೇಜು ಸಭಾಂಗಣ ಸೇರಿದಂತೆ ವಿವಿಧ ಕಡೆಗೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಿಪ್ಪನ್‌ಪೇಟೆ ಮತ್ತು ಕುಪ್ಪಗಡ್ಡೆ ಕೇಂದ್ರಗಳ ಮಹಿಳೆಯರ ಜತೆಗೆ ಸ್ವತಃ ಮುಖ್ಯಮಂತ್ರಿಗಳು ನೇರ ಸಂವಾದ ನಡೆಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ತಿಮ್ಮಣ್ಣ, ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಕಲ್ಮನೆ ಸುರೇಶ್, ಮುಷೀರ್ ಅಹ್ಮದ್, ಭಂಡಾರಿ ಮಾಲತೇಶ್, ಕಲವತ್ತಿ ಈಶಣ್ಣ, ನಾಗರಾಜ್, ಮಂಜುನಾಯ್ಕ, ನಾಗರಾಜ್ ನಾಯ್ಕ, ರಘುಪತಿ ಕಟ್ಟಿಗೆಹಳ್ಳ ಇತರರಿದ್ದರು.