ಜಿಲ್ಲೆ

ನೂರರಷ್ಟು ಸಾಧನೆ ಮಾಡಿದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸನ್ಮಾನ

ಮೈಸೂರು: ಮೈಸೂರು ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿರುವ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿಷಯವಾರು ಶೇ.100 ಫಲಿತಾಂಶ ಬಂದಿರುವ ಸರ್ಕಾರಿ ಪ್ರೌಢಶಾಲಾ ಶಿಕ್ಷಕರನ್ನು ಅಭಿನಂದಿಸಲಾಯಿತು.
ಹೂಟಗಳ್ಳಿ ರೋಟರಿ ಮಿಡ್‌ಟೌನ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ)ದ ಪ್ರಾಂಶುಪಾಲೆ ಗೀತಾಂಬಾ ಮಾತನಾಡಿ, ಎಸ್‌ಎಸ್‌ಎಲ್ಸಿ ಪರೀಕ್ಷೆಯು ಇತ್ತೀಚಿನ ದಿನಗಳಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಅದರಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ನಿಮ್ಮ ಶ್ರಮದಿಂದ ಫಲಿತಾಂಶ ಸುಧಾರಿಸುತ್ತಿದೆ. ಮುಂದೆಯು ನಿಮ್ಮ ವೃತ್ತಿ ಜೀವನ ಹೀಗೆ ಯಶಸ್ವಿಯಾಗಿ ಸಾಗಲೆಂದು ಶುಭಹಾರೈಸಿದರು.
ಡಯಟ್ ಪ್ರಾಂಶುಪಾಲ ನಾಗರಾಜಯ್ಯ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲ ವರ್ಗದ ಸಿಬ್ಬಂದಿಗೂ ತಮ್ಮದೆ ಆದ ಒಂದು ಕಾರ್ಯವ್ಯಾಪ್ತಿ ಇರುತ್ತದೆ. ಅದನ್ನು ಎಲ್ಲರೂ ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಶಿಕ್ಷಕರು, ಶಿಕ್ಷಕೇತರರು, ಅಧಿಕಾರಿಗಳು ಸಹ ಭಾಗವಹಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಮಾತನಾಡಿ, ಮೈಸೂರು ತಾಲೂಕು ಶೈಕ್ಷಣಿಕ ವಲಯವು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಬರಲು ಶಿಕ್ಷಕರ ಪಾತ್ರ ಪ್ರಮುಖ. ಮುಂದೆಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲರೂ ಹೀಗೆಯೇ ಶ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಗೌರವ ಅಧ್ಯಕ್ಷ ಮಾಲಂಗಿ ಸುರೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಹದೇವ್, ತಾಲೂಕು ವ್ಯಾಪ್ತಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಮೋಹನ್‌ಕುಮಾರ್, ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿಧರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದುಂಡಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಾಲೇಗೌಡ, ತಾಲೂಕು ಪ್ರಾಥಮಿಕ ಶಾಲಾ ಎಸ್‌ಸಿ, ಎಸ್‌ಟಿ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಬಿಆರ್‌ಸಿ ಮಹದೇವ್, ಮಂಜುನಾಥ್, ದಾನಿ ರಾಜೇಶ್ ಫಟ್ಟಾ ಇತರರು ಇದ್ದರು.
ಶೇ.100 ಫಲಿತಾಂಶ ಪಡೆದ ಮೈಸೂರು ತಾಲೂಕಿನ ಪುಟ್ಟೇಗೌಡನಹುಂಡಿ, ಬೆಳವಾಡಿ, ಕಲ್ಲೂರು ನಾಗನಹಳ್ಳಿ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಾಲೆಯ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಷಯವಾರು ಶೇ.100 ಫಲಿತಾಂಶಕ್ಕೆ ಕಾರಣರಾದ ಎಸ್.ಕಲ್ಲಹಳ್ಳಿ ಪ್ರೌಢಶಾಲೆಯ ಎ.ಎಂ.ಗುರುಸ್ವಾಮಿ, ದೊಡ್ಡಕಾನ್ಯ ಪ್ರೌಢಶಾಲೆಯ ಶಾಂತಾ, ಸಿದ್ದರಾಮನಹುಂಡಿ ಶಾಲೆಯ ಕುಮಾರಾರಾಧ್ಯ, ನಜ್ಜಾಷರೀಫ್ ಸೇರಿದಂತೆ 40 ವಿಷಯ ಶಿಕ್ಷಕರನ್ನು ಗೌರವಿಸಲಾಯಿತು.