ಬೆಳ್ತಂಗಡಿ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಡಾ.ಎಲ್.ಎಚ್.ಮಂಜುನಾಥ ಅವರನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಮಾತನಾಡಿ, ಡಾ.ಎಲ್.ಎಚ್.ಮಂಜುನಾಥರು ಓರ್ವ ಉತ್ತಮ ಓದುಗರೂ ಬರಹಗಾರರೂ ಆಗಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಬೆಳ್ತಂಗಡಿ ತಾಲೂಕಿನಿಂದ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತಿ ಹೆಚ್ಚು ಆಜೀವ ಸದಸ್ಯರಾಗಿ ನೋಂದಣಿಯಾಗುವಲ್ಲಿ ಕಾರಣರಾದವರು. ಅಲ್ಲದೆ ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಮಾರ್ಗದರ್ಶನದೊಂದಿಗೆ ಸಹಕಾರ ನೀಡಿದವರು. ಇವರ ಸಾಮಾಜಿಕ ಮತ್ತು ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದರು.
ಸಾಹಿತ್ಯ ಪರಿಷತ್ತಿನ ತಾಲೂಕಿನ ಅಧ್ಯಕ್ಷ ಡಿ.ಯದುಪತಿ ಗೌಡ, ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು, ಕೋಶಾಧ್ಯಕ್ಷರಾದ ಡಿ.ಧರ್ಣಪ್ಪ ಮತ್ತು ಉಜಿರೆ ಶ್ರೀ ಧ.ಮ. ಕಾಲೇಜಿನ ಉಪನ್ಯಾಸಕರಾದ ಡಾ.ಡಿ.ಎ.ನಾಗಣ್ಣ ಉಪಸ್ಥಿತರಿದ್ದರು.