ಜಿಲ್ಲೆ

ಎಚ್‌ಎಸ್‌ವಿ ರೂಪಕ ಸಾಮ್ರಾಜ್ಯದ ಸಾಮ್ರಾಟ: ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರೂಪಕವು ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರ ಕವಿತೆಗಳಲ್ಲಿ ಕಿಕ್ಕಿರಿದು ಬರುತ್ತವೆ. ಆದ್ದರಿಂದ ಎಚ್‌ಎಸ್‌ವಿ ರೂಪಕ ಸಾಮ್ರಾಜ್ಯದ ಸಾಮ್ರಾಟ ಎಂದು ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಪು.ತಿ.ನರಸಿಂಹಚಾರ್ ಟ್ರಸ್ಟ್ ಮತ್ತು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ‘ಇಷ್ಟು ಕಾಲ ಒಟ್ಟಿಗಿದ್ದು’ ಅವರಿಗೆ ಪುಷ್ಪ, ನುಡಿ, ಗೀತ ಹಾಗೂ ನೃತ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಪರಂಪರೆಯ ಸಾರವನ್ನು ಹೀರಿಕೊಂಡು ಬಂದ ಎಚ್‌ಎಸ್‌ವಿ ಖ್ಯಾತಿ ಪಡೆದರು. ಕುಮಾರವ್ಯಾಸ ಅವರಿಗೆ ಅತ್ಯಂತ ಪ್ರಿಯವಾದ ವ್ಯಕ್ತಿಯಾಗಿದೆ. ರೂಪಕ ಸಾಮ್ರಾಜ್ಯದ ಮಹಾರಾಜರು ಎಂಬ ಬಿರುದು ಕುಮಾರವ್ಯಾಸರಿಗಿತ್ತು ಎಂದರು.

ಸುಗಮ ಸಂಗೀತ ಹಾಗೂ ಕಾವ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರ ಜೋಗುಳದ ಹಾಡುಗಳು ಇಂದಿಗೂ ಪ್ರಸ್ತುತವಾಗಿದ್ದು, ಅಭಿಮಾನಿಗಳ ಮನಸ್ಸಲ್ಲಿ ಗುನುಗುನುತ್ತಿರುತ್ತವೆ. ನಾನು ಜಾಲಿ ಕವಿಯಾದರೆ, ಎಚ್‌ಎಸ್‌ವಿ ಲಾಲಿ ಕವಿ ಆಗಿದ್ದರು. ಹೀಗೆ ನಮ್ಮ ಸಾಹಿತ್ಯ ಯಾನ ಸ್ನೇಹದ ಜತೆಯೇ ನಡೆದುಕೊಂಡು ಬರುತ್ತಿತ್ತು. ಎಚ್‌ಎಸ್‌ವಿ ಅವರ ಕಾವ್ಯ ವೈಶಿಷ್ಯವೇ ಚೆನ್ನಾಗಿತ್ತು. ನಾವುಗಳು ನವ್ಯ ಕಾವ್ಯದ ನೆಲಗಟ್ಟಿನಲ್ಲಿ ಬಂದವರು. ನಮಗೆ ಚಳವಳಿಯ ಬೆಂಬಲವಿತ್ತು. ಲಂಕೇಶ್, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಅಂತಹ ಗಾಡ್ ಫಾದರ್‌ಗಳಿದ್ದರು. ಎಚ್‌ಎಸ್‌ವಿ ಅವರು ಸಣ್ಣ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಬಹು ಎತ್ತರಕ್ಕೆ ಏರುವ ಮೂಲಕ ತಾನಾಗಿಯೇ ಕವಿಯಾದರು ಎಂದರು.

ಕಾದಂಬರಿ, ನಾಟಕ, ಪ್ರಬಂಧಗಳು, ಆತ್ಮಕಥೆಗಳಲ್ಲಿ ಸಮೃದ್ಧ ಕೃತಿ ರಚನೆ ಮಾಡಿದ ಡಾ.ಎಚ್‌ಎಸ್‌ವಿ ಅವರ ಚಿಂತನೆಗಳು ಒಂದು ಆಯಾಮವನ್ನು ಪಡೆದುಕೊಳ್ಳುತ್ತವೆ. ಜಿ.ಎಸ್.ಶಿವರುದ್ರಪ್ಪ ಅವರು ನಾವು ಮತ್ತು ಎಚ್‌ಎಸ್‌ವಿ ಅವರು ಒಟ್ಟಿಗೆ ಇರುವುದನ್ನು ನೋಡಿ ಕನ್ನಡ ಸಾಹಿತ್ಯದ ಅಶ್ವಿನಿ ನಕ್ಷತ್ರಗಳು ಎಂಬುವ ಮಾತನ್ನು ಹೇಳಿ ನಮ್ಮ ಮನಸನ್ನು ಸಂತಸಗೊಳಿಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಪುತಿನ ಟ್ರಸ್ಟ್ ಮತ್ತು ಕೆಎಸ್‌ನ ಟ್ರಸ್ಟ್ ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತಿವೆ. ಮಂಡ್ಯ ಜಿಲ್ಲೆಯನ್ನ ಸಾಹಿತ್ಯ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೋಯ್ದವರನ್ನು ನೆನಪಿಸಿಕೊಳ್ಳುವುದು ಸರಿಯಿದೆ. ಎಚ್‌ಎಸ್‌ವಿ ಅವರ ನಾಟಕಗಳು ಕಣ್ಣಿಗೆ ಕಟ್ಟುತ್ತವೆ. ಕೆಎಸ್‌ನ ಅವರಿಗೂ ಕರ್ನಾಟಕ ಸಂಘಕ್ಕೂ ಅವಿನಾಭಾವ ಸಂಬಂಧವಿತ್ತು. ಇಷ್ಟು ಕಾಲ ಒಟ್ಟಿಗಿದ್ದು ಎನ್ನುವ ಸಾಲುಗಳನ್ನ ನೋಡಿದರೆ ಅವರು ಅನುಭವಿಸಿದ ಜೀವನ, ನೆಲದ ಋಣ ಇವೆಲ್ಲವೂ ನೋಡಿದರೆ ಮತ್ತೆ ಮತ್ತೆ ಹುಟ್ಟಿ ಬಾ ಎನ್ನುವ ಎಚ್‌ಎಸ್‌ವಿ ಅವರ ಮಾತನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ. ಇವರು ಎಲ್ಲವನ್ನೂ ಮೀರಿ ನಿಂತ ವಿಶ್ವಪ್ರಜ್ಞೆ ಕವಿ ಎಚ್‌ಎಸ್‌ವಿ ಎಂದು ಶ್ಲಾಘಿಸಿದರು.

ಕೆಎಸ್‌ನ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಸಾಹಿತಿ ಎಚ್.ದುಂಡಿರಾಜ್, ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಅಲಯನ್ಸ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು. ಗೀತ ನಮನದಲ್ಲಿ ಯುವ ಹಾಗೂ ಹಿರಿಯ ಗಾಯಕರು ಹಾಡಿ ರಂಜಿಸಿದರು.