ಜಿಲ್ಲೆ

ಸಮಾಜದ ಅಂಕುಡೊಂಕು ತಿದ್ದಿದ ಶಿವಕುಮಾರ ಶ್ರೀ

Davangere - Desk - Ganesh M K

ಚನ್ನಗಿರಿ: ಸಿರಿಗೆರೆ ಲಿಂ.ಶಿವಕುಮಾರ ಸ್ವಾಮಿಗಳು ಸಮಾಜದ ಅಂಕುಡೊಂಕು ಸರಿಪಡಿಸುವ ಕೆಲಸ ಮಾಡಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಬಣ್ಣಿಸಿದರು.

ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಅನುಭವ ಮಂಟಪ ಶಾಲೆಯಲ್ಲಿ ಲಿಂ.ಶಿವಕುಮಾರ ಸ್ವಾಮಿಗಳ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಸಮಾಜದ ಜನಸಾಮಾನ್ಯರ ಅರಿವಿನ ಒಳಗಣ್ಣು ತೆರೆಸುವ ಸಲುವಾಗಿ ಸಾಮೂಹಿಕ ವಿವಾಹ, ಸರ್ವ ಶರಣ ಸಮ್ಮೇಳನ ಮತ್ತು ತರಳಬಾಳು ಹುಣ್ಣಿಮೆ ನಡೆಸುವ ಮೂಲಕ ವೈಚಾರಿಕ ನೆಲೆಗಟ್ಟಿನ ಮೇಲೆ ಕಾರ್ಯಕ್ರಮ ಅಯೋಜನೆ ಮಾಡಿ ಜನಮಾನಸದಲ್ಲಿ ಐಕ್ಯತೆಯ ಬೀಜ ಬಿತ್ತಿದರು ಎಂದು ಹೇಳಿದರು.

ವಿಶ್ವ ಬಂಧು ಮರುಳಸಿದ್ದರ ಚಿಂತನೆ, ಬಸವಣ್ಣನವರ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡುವ ಮೂಲಕ ಶರಣ ದೀವಿಗೆಯ ಮಹಾಬೆಳಕು ಎನಿಸಿಕೊಂಡರು ಎಂದರು.

ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಚಿಂತಕರಾಗಿ, ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ರಸ್ತೆ, ವಿದ್ಯುತ್ ಸಂಪರ್ಕ ಇಲ್ಲದೆ ಇರುವಂತಹ ಕುಗ್ರಾಮಗಳಲ್ಲೂ ಶಾಲಾ ಕಾಲೇಜು ತೆರೆದು ಅಕ್ಷರ ಕ್ರಾಂತಿ ಮಾಡಿದರು ಎಂದು ಬಣ್ಣಿಸಿದರು.

ಅಧ್ಯಕ್ಷತೆಯನ್ನು ತರಳಬಾಳು ಶಾಲೆ ಕಾರ್ಯದರ್ಶಿ ಎಂ.ಬಿ. ರಾಜಪ್ಪ ವಹಿಸಿದ್ದರು. ಪ್ರಾದೇಶಿಕ ವಲಯಾಧಿಕಾರಿ ಪಿ.ಬಿ. ತಿಪ್ಪೇಸ್ವಾಮಿ, ತರಳಬಾಳು ಕಲಾ ಸಂಘದ ಅಧ್ಯಕ್ಷ ರಾಜಶೇಖರಯ್ಯ, ಬೆನಕನಹಳ್ಳಿ ಸ್ವಾಮಿ, ದೇವರಾಜ್, ರಂಗನಾಥ್, ಬಾಲರಾಜ್, ಪ್ರಾಚಾರ್ಯ ರುದ್ರೇಶ್ ವಿ. ಮಠದ್ ಇದ್ದರು.