ಜಿಲ್ಲೆ

ದೇಶ ಕಂಡ ಮಹಾನ್ ಆರ್ಥಿಕ ಪಿತಾಮಹ

ಹೊನ್ನಾಳಿ: ಆರ್​ಬಿಐ ಗವರ್ನರ್ ಆಗಿ, ಎರಡು ಬಾರಿ ಪ್ರಧಾನಿಯಾಗಿ, ಆರ್ಥಿಕ ಪಿತಾಮಹರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಪ್ರಧಾನಿ ಡಾ.ಮನಮೋಹನ್​ಸಿಂಗ್ ಅವರು ಚಿರಸ್ಮರಣೀಯ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಹೇಳಿದರು.

ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್​ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಮನಮೋಹನ್​ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ ಕಂಡ ಗೌರವಾನ್ವಿತ ನಾಯಕರಲ್ಲಿ ಪ್ರಮುಖರಾದ ಸಿಂಗ್, ಮಹಾ ಮೌನಿಯಾದರೂ ಟೀಕಾಕಾರರಿಗೆ ಮೌನದಿಂದಲೇ ಉತ್ತರಿಸಿ, ಬಾಯಿ ಮುಚ್ಚಿಸುವ ನೈಪುಣ್ಯತೆ ಹೊಂದಿದ್ದರು. ಅವರ ಅಧಿಕಾರವಧಿಯಲ್ಲಿ ಜಿಡಿಪಿ ದರ 10.2 ರಷ್ಟು ಏರಿಕೆ ಕಂಡಿತ್ತು. ಇದಕ್ಕೆ ಅವರ ಆರ್ಥಿಕ ನೀತಿಗಳೇ ಕಾರಣ ಎಂದರು.

ಮುಖಂಡ ಡಾ.ಈಶ್ವರ್​ನಾಯ್್ಕ ಮಾತನಾಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮಾಹಿತಿ ಹಕ್ಕು (ಆರ್​ಟಿಐ) ಕಾಯ್ದೆ ಜಾರಿಗೆ ತಂದ ಕೀರ್ತಿ ಸಿಂಗ್ ಅವರಿಗೆ ಸಲ್ಲುತ್ತದೆ. ದೇಶದೊಳಗೆ ಸ್ವಲ್ಪವಾದರೂ ಭ್ರಷ್ಟಾಚಾರ ಕಡಿಮೆಯಾಗಲು ಕಾರಣರಾಗಿದ್ದಾರೆ ಎಂದು ಸ್ಮರಿಸಿದರು.

ಭಾರತ ಹಾಗೂ ಅಮೆರಿಕಾ ನಡುವೆ ಆದ ಐತಿಹಾಸಿಕ ಅಣು ಒಪ್ಪಂದಕ್ಕೂ ಸಿಂಗ್ ಕಾರಣ. ಯುಪಿಎ ಮಿತ್ರ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ರಾಜೀನಾಮೆಗೂ ಮುಂದಾದರು. ಆ ವೇಳೆ ಬೆಂಬಲ ವಾಪಸ್ ಪಡೆದರೂ ಹಿಂದೆ ಸರಿಯದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಮುಖಂಡ ಎಚ್.ಎ.ಉಮಾಪತಿ, ಟಿಎಪಿಸಿಎಂಎಸ್ ಅಧ್ಯಕ್ಷ ಕಾಯಿ ಬಸವರಾಜು, ಪುರಸಭೆ ಅಧ್ಯಕ್ಷ ಮೈಲಪ್ಪ, ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ, ಬೇಲಿಮಲ್ಲೂರು ಶಿವಾನಂದ್, ವೀರಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಆರ್.ನಾಗಪ್ಪ, ಯುವ ಕಾಂಗ್ರೆಸ್​ನ ಪ್ರಶಾಂತ್ ಬಣ್ಣಜ್ಜಿ, ಮನೋಜ್, ಸರಳಿಮನೆ ರಾಜು ಇತರರಿದ್ದರು. ಇದೇ ವೇಳೆ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಲಾಯಿತು.