ಜಿಲ್ಲೆ

ಜೈವಿಕ ಇಂಧನಗಳ ವೃದ್ಧಿಗೆ ಗಿರಿಜನರ ಪಣ

ಪ್ರಸಿನ್ ಕೆ.ಆರ್

ಶಿವು ಹುಣಸೂರು

ವಿಶ್ವದಾದ್ಯಂತ ಕಚ್ಚಾತೈಲಕ್ಕೆ ಪರ್ಯಾಯವಾಗಿ ವಿವಿಧ ಇಂಧನ ಮೂಲಗಳ ಆವಿಷ್ಕಾರ ಮತ್ತು ಬಳಕೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾಲಘಟ್ಟದಲ್ಲಿ ಪರ್ಯಾಯ ಇಂಧನಗಳ ಪೈಕಿ ಜೈವಿಕ ಇಂಧನ ಭವಿಷ್ಯದ ಆಶಾಕಿರಣವಾಗಿ ಕಾಣುತ್ತಿದ್ದು, ತಾಲೂಕಿನ ಡೀಡ್ ಸಂಸ್ಥೆ ಮತ್ತು ವಿವಿಧ ಆದಿವಾಸಿ ಗಿರಿಜನರು ಜೈವಿಕ ಇಂಧನಗಳ ಸಂಪನ್ಮೂಲಗಳ ವೃದ್ಧಿಯಲ್ಲಿ ದಶಕಗಳಿಂದ ಸದ್ದಿಲ್ಲದೇ ಕಾರ್ಯಪ್ರವೃತ್ತರಾಗಿವೆ.

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹಾಡಿಗಳ ಮೂಲನಿವಾಸಿಗಳು ಜೈವಿಕ ಇಂಧನಗಳ ಗಿಡಮರಗಳನ್ನು ಬೆಳೆಸುವ, ನಾಗರಿಕ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದು ಅಕ್ಷರಸ್ಥ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಜಗತ್ತಿನಾದ್ಯಂತ ವಿವಿಧ ಇಂಧನ ಮೂಲಗಳ ಸಂಪನ್ಮೂಲಗಳ ಕೊರತೆ ಕಾಡುತ್ತಿರುವ ಸಂದರ್ಭದಲ್ಲಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಅಥವಾ ಜೈವಿಕ ಇಂಧನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿವೆ. ಕೇಂದ್ರ ಸರ್ಕಾರ 2018ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿ ಜಾರಿಗೊಳಿಸಿದೆ. 2030ರೊಳಗೆ ಜೈವಿಕ ಇಂಧನ ನೀತಿಯಡಿ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ (ಜೈವಿಕ ಇಂಧನ) ಮತ್ತು ಡೀಸೆಲ್‌ನಲ್ಲಿ ಶೇ.5ರ ಪ್ರಮಾಣದಲ್ಲಿ ಬಯೋಡೀಸೆಲ್ ಮಿಶ್ರಣದ ಗುರಿಯನ್ನು ನಿಗದಿಪಡಿಸಿಕೊಂಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಧೀಂದ್ರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡಿ, ಭವಿಷ್ಯದಲ್ಲಿ ಜೈವಿಕ ಇಂಧನ ವೃದ್ಧಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಜೈವಿಕ ಇಂಧನ ಎಂದರೇನು?

ಪ್ರಾಣಿ ಮತ್ತು ಸಸ್ಯಗಳ ಮೂಲಗಳಿಂದ ಸಾವಯವ ವಸ್ತುಗಳ (ಬಯೋಮಾಸ್) ವಿಭಜನೆಯಿಂದ ಪಡೆದ ಶಕ್ತಿಯನ್ನು ಜೈವಿಕ ಇಂಧನ ಎನ್ನಲಾಗುತ್ತದೆ. ಹುಲ್ಲು, ಮರ, ಬೆಳೆಗಳು, ಕೃಷಿ ಮತ್ತು ಪ್ರಾಣಿ ತ್ಯಾಜ್ಯಗಳ ನಿರ್ವಹಣೆ ಮೂಲಕ ಜೈವಿಕ ಇಂಧನ ಪಡೆಯಲು ಸಾಧ್ಯವಿದೆ. ವಿಶ್ವದಾದ್ಯಂತ ಇಂಧನದ ಲಭ್ಯತೆ ಕಡಿಮೆಯಾಗುತ್ತಿದ್ದಂತೆ ಪರ್ಯಾಯವಾಗಿ ಆಧುನಿಕ ಜಗತ್ತು ಪ್ರಾಚೀನತೆಯತ್ತ ಮುಖ ಮಾಡುತ್ತಿದೆ ಎನ್ನುವುದಕ್ಕೆ ಜೈವಿಕ ಇಂಧನ ಜ್ವಲಂತ ಸಾಕ್ಷಿಯಾಗಿದೆ. ನಮ್ಮ ಹಿಂದಿನ ಪೀಳಿಗೆಯವರು ಅಡುಗೆ ತಯಾರಿಸಲು, ಬೆಳಕು ಚೆಲ್ಲಲು ಬಳಸುತ್ತಿದ್ದ ಕೆಲವು ಉಪಕರಣಗಳು ಮತ್ತು ಇಂಧನಗಳನ್ನು ದೇಸೀ ಸೊಬಗು ಮತ್ತು ಆಧುನಿಕತೆಯ ಸ್ಪರ್ಷದೊಂದಿಗೆ ಜೈವಿಕ ಇಂಧನವನ್ನಾಗಿ ಬಳಸಲು ಮುಂದಾಗಿದ್ದೇವೆ.

ಎರಡು ವಿಧಗಳಿವೆ: ಜೈವಿಕ ಇಂಧನಗಳಲ್ಲಿ ಜೈವಿಕ ಎಥನಾಲ್ ಮತ್ತು ಬಯೋ ಡೀಸೆಲ್ ಎಂದು ಎರಡು ವಿಧಗಳಿವೆ. ಎಥನಾಲ್‌ನ್ನು ಪೆಟ್ರೋಲ್‌ನೊಂದಿಗೆ ಬೆರಸಿದರೆ, ಬಯೋಡೀಸೆಲ್‌ನ್ನು ಡೀಸೆಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಎಥನಾಲ್ ವಾಹನ ಇಂಧನಕ್ಕೆ ಪೂರಕವಾದರೆ, ಬಯೋಡೀಸೆಲ್ ಪೆಟ್ರೋಲಿಯಂಗೆ ಪರ್ಯಾಯವಾಗಿ ಬಳಸಬಹುದಾದ ಇಂಧನವಾಗಿದೆ. ನಮ್ಮ ನೆಲದಲ್ಲಿ ಹೊಂಗೆಮರ, ಹಿಪ್ಪೆ, ಬೇವು, ಸೀಮರೂಬ, ಸುರಹೊನ್ನೆ, ಜಟ್ರೋಪಾ ಗಿಡ(ಕಾಚಿಕಳ್ಳಿ) ಮರಗಳನ್ನು ಬೆಳಸುವ ಮೂಲಕ ಜೈವಿಕ ಇಂಧನ ಪಡೆಯಲು ಸಾಕಷ್ಟು ಅವಕಾಶಗಳಿವೆ. ಸ್ಥಳೀಯವಾಗಿ ಇವುಗಳನ್ನು ರೈತರು ತಮ್ಮ ಜಮೀನಿನ ಬದುಗಳಲ್ಲಿ ಬೆಳೆದಲ್ಲಿ ಆರ್ಥಿಕವಾಗಿಯೂ ಸಬಲರಾಗಲು, ಪರಿಸರವನ್ನು ಉಳಿಸಲು ಸಾಧ್ಯವಿದೆ. ಕಚ್ಚಾತೈಲದ ಬೆಲೆಗಳು ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ದೇಶದ ವಿದೇಶಿ ವಿನಿಮಯ ದುಬಾರಿಯಾಗುತ್ತಿದೆ. ಆರ್ಥಿಕತೆ ಕುಸಿಯುವತ್ತ ಸಾಗುತ್ತದೆ. ಈ ಎಲ್ಲ ಕೊರತೆಗಳನ್ನು ನೀಗಿಸಲು ಸ್ಥಳೀಯವಾಗಿ ಜೈವಿಕ ಇಂಧನ ಮೂಲ ಮರಗಿಡಗಳನ್ನು ಬೆಳಸಿದಲ್ಲಿ ಇಂಧನಗಳ ತಯಾರಿ ಸುಲಭವಾಗಲಿದೆ.

ಗಿರಿಜನರಲ್ಲಿದ್ದಾರೆ ಸಂಪನ್ಮೂಲ ವ್ಯಕ್ತಿಗಳು: ಡೀಡ್ ಸಂಸ್ಥೆ 10 ವರ್ಷಗಳ ಹಿಂದೆ ಜೈವಿಕ ಇಂಧನ ಉತ್ಪಾದನೆ ಕುರಿತಂತೆ ತನ್ನ ಕಾರ್ಯಕ್ಷೇತ್ರವಾದ ಗಿರಿಜನರ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಜೈವಿಕ ಇಂಧನ ಉತ್ಪಾದನೆ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿತು. ಕಾಡಂಚಿನ ಹಾಡಿಗಳು, ಲಕ್ಷ್ಮಣತೀರ್ಥ ನದಿಯಂಚಿನಲ್ಲಿರುವ ಹಾಡಿಗಳ ಜನರಿಗೆ ಜೈವಿಕ ಇಂಧನ ಗಿಡಗಳ ಕೃಷಿಕಾರ್ಯಕ್ಕೆ ಪ್ರೋತ್ಸಾಹ ನೀಡಿದರು. ಅರಣ್ಯವಾಸಿಗಳೇ ಅಗಿದ್ದ ಗಿರಿಜನರು ಜೈವಿಕ ಇಂಧನ ಮರಗಳನ್ನು ಗುರುತಿಸಿ, ಬೆಳೆಸುವ ಮತ್ತು ಅವುಗಳ ಉಪಯೋಗಗಳ ಕುರಿತು ತಾವೆ ತಾವಾಗಿ ಹೇಳತೊಡಗಿದರು. ಸೀಮರೂಬ ಕ್ಯಾನ್ಸ್‌ರ್ ಕಾಯಿಲೆಗೆ ರಾಮಬಾಣ ಎಂದು ಹಿರಿಯ ಆದಿವಾಸಿ ಮುಖಂಡ ವಿಠಲ್ ನಾಣಾಚ್ಚಿ ತಿಳಿಸುತ್ತಾರೆ. ಹೀಗೆ ಪ್ರಕೃತಿಯೊಂದಿಗೆ ಬೆಳೆದಿದ್ದ ಅವರು ಜೈವಿಕ ಇಂಧನ ವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಠಲ್ ನಾಣಾಚ್ಚಿ, ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಗಿರಿಜನ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮುಂತಾದವರು ಜೈವಿಕ ಇಂಧನಗಳ ಉಪಯುಕ್ತತೆ ಕುರಿತು ನಿರರ್ಗಳವಾಗಿ ಮಾತನಾಡಬಲ್ಲರು. ಇತರರಿಗೆ ಅರಿವು ಮೂಡಿಸುವಷ್ಟು ಜ್ಞಾನ ಹೊಂದಿದ್ದಾರೆ.

ಎನ್‌ಐಇ ಕಾಲೇಜು ಸಹಯೋಗ: ಡೀಡ್ ಸಂಸ್ಥೆ ಮತ್ತು ಗಿರಿಜನರೊಂದಿಗೆ ಮೈಸೂರಿನ ಎನ್‌ಐಇ ಕಾಲೇಜು ಸಾಥ್ ನೀಡುವ ಮೂಲಕ ರೈತರು ಮತ್ತು ಗಿರಿಜನರು ಬೆಳೆದು ತಂದ ಜೈವಿಕ ಇಂಧನ ಮರಗಳ ಬೀಜಗಳನ್ನು ಎಣ್ಣೆಯಾಗಿ ಪರಿವರ್ತಿಸಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಮಿಶ್ರಣ ಮಾಡಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ಗಿರಿಜನರಿಗೆ ಈ ಕುರಿತು ಮಾಹಿತಿ ನೀಡುತ್ತಿದಾರೆ.

ಉಳಿತಾಯ ಸಂಘಗಳ ಸಹಕಾರ: ಇದೀಗ ತಾಲೂಕಿನ 30ಕ್ಕೂ ಹೆಚ್ಚು ಗಿರಿಜನ ಮಹಿಳಾ ಉಳಿತಾಯ ಸಂಘಗಳು ಸಕ್ರಿಯವಾಗಿ ಜೈವಿಕ ಇಂಧನ ಸಂಪನ್ಮೂಲಗಳ ಅಭಿವೃದ್ಧಿಗೆ ಪಾಲ್ಗೊಳ್ಳುವ ತಯಾರಿ ನಡೆಸಿವೆ. ಲಕ್ಷ್ಮಣತೀರ್ಥ ನದಿಯಂಚಿನಲ್ಲಿರುವ ಕೊಳವಿಗೆ, ಬಿಲ್ಲೇನಹೊಸಳ್ಳಿ ಮುಂತಾದ ಹಾಡಿಯ ಉಳಿತಾಯ ಸಂಘಗಳ ಸದಸ್ಯರು ತಮ್ಮ ಗ್ರಾಮದಲ್ಲಿರುವ ಜೈವಿಕ ಇಂಧನ ಮರಗಳಲ್ಲಿನ ಬೀಜಗಳನ್ನು ಸಂಗ್ರಹಿಸಿ ಎನ್‌ಐಇ ಕಾಲೇಜಿಗೆ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಮಾತ್ರವಲ್ಲದೇ ತಮ್ಮದೇ ಭೂಮಿಯಿದ್ದಲ್ಲಿ ಅಲ್ಲಿ ಜೈವಿಕ ಇಂಧನ ಮರಗಳನ್ನು ಬೆಳೆಸಲು ಆರಂಭಿಸಿದ್ದಾರೆ.