ಶಿವಮೊಗ್ಗ: ಕೆಲವು ಹಸೆ ಚಿತ್ತಾರಗಳನ್ನು ಪುರುಷರು ರಚನೆ ಮಾಡುವುದಿಲ್ಲ. ಮಹಿಳೆಯರು ಮಾತ್ರ ರಚನೆ ಮಾಡುತ್ತಾರೆ. ಕೆಲ ಚಿತ್ತಾರಗಳಲ್ಲಿ ಕೌಟುಂಬಿಕ ಸಂಗತಿಗಳನ್ನೂ ಚಿತ್ರಿಸಬಹುದು. ತಾಯಿಕಟ್ಟಿನ ಸಮುದಾಯದಲ್ಲಿ ಹೆಂಗಸು ಎಲ್ಲವನ್ನೂ ನಿರ್ಧರಿಸುತ್ತಾರೆ. ಮಲೆನಾಡಿನಲ್ಲಿ ಇಂತಹ ಐದಾರು ಸಮುದಾಯಗಳಿವೆ. ಹೀಗೆ ಹಸೆ ಚಿತ್ತಾರದಲ್ಲೂ ಕೆಲವು ಮಹಿಳೆಯರಿಗೆ ಮಾತ್ರ ಸೀಮಿತ ಎಂದು ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ಮಾನಸ ಟ್ರಸ್ಟ್ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಿಂದ ಏರ್ಪಡಿಸಿದ್ದ ಹಸೆ ಚಿತ್ತಾರ ಕಲಿಕಾ ಶಿಬಿರದ ಸಮಾರೋಪದಲ್ಲಿ ಸೋಮವಾರ ಮಾತನಾಡಿದ ಅವರು, ಹಸೆ ಚಿತ್ತಾರದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅರ್ಥವಿದೆ. ಒಂದು ಕಾಲದಲ್ಲಿ ಬಹುದೊಡ್ಡ ಅಧಿಕಾರಸ್ಥ ವಲಯದಲ್ಲಿದ್ದ ಆದಿವಾಸಿಗಳು ಬೇರೆ ಬೇರೆ ಕಾರಣಕ್ಕೆ ಭೂಮಾಲಿಕರ ಅಡಿಯಾಳುಗಳಾಗಿ ಗೇಣಿದಾರರಾದರು. ಬಳಿಕ ಅವರ ಹಂಬಲದ ರೂಪವಾಗಿ ಕಲೆಯಾಗಿ ಹೊರಹೊಮ್ಮಿದ್ದೇ ಹಸೆ ಚಿತ್ತಾರ ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ ಮಾತನಾಡಿ, ಹಸೆ ಚಿತ್ತಾರದ ಹಿನ್ನೆಲೆ, ಅದರ ಅರ್ಥ ತಿಳಿದ ಮೇಲೆ ಅದರ ಬಗ್ಗೆ ಮತ್ತಷ್ಟು ಪ್ರೀತಿ ಬೆಳೆಯುತ್ತದೆ. ಅದೊಂದು ಸೂಕ್ಷ್ಮ ಕಲೆ. ಹಸೆ ಚಿತ್ತಾರ ಪುಸ್ತಕದಲ್ಲಿ ಅನೇಕ ಸಂಗತಿಗಳು ಉಲ್ಲೇಖವಾಗಿವೆ. ಯಾವುದನ್ನಾದರೂ ಕಲಿಯುವ ಮೊದಲು ಅದರ ಮೂಲ ಅರ್ಥವಾದರೆ ಕಲಿಕೆ ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಸೆ ಚಿತ್ತಾರ ಕಲಿಕಾ ಶಿಬಿರ ಯಶಸ್ವಿಯಾಗಿದೆ ಎಂದರು.
ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಕಲೆ ಮೂಲಕ ಜಾನಪದ ಸಂಸ್ಕೃತಿಯನ್ನು ತಿಳಿಸುವುದು ಹಸೆ ಚಿತ್ತಾರದ ವಿಶೇಷತೆ. ಈ ಕಲೆಯಲ್ಲಿ ಇತಿಹಾಸ, ಜೀವನ ಮೌಲ್ಯವಿದೆ. ಅದನ್ನು ಗ್ರಹಿಸುವ ಗುಣ ಮುಖ್ಯ. ಯಾವುದೇ ಶಿಕ್ಷಣವಿಲ್ಲದ ಜನಸಮೂಹ ರೂಪಿಸಿರುವುದು ಹಸೆ ಚಿತ್ತಾರ ಎಂಬುದು ವಿಶೇಷವಾಗಿದೆ ಎಂದು ಹೇಳಿದರು.
ಹೆಗ್ಗೋಡು ಚರಕ ಸಂಸ್ಥೆ ಅಧ್ಯಕ್ಷೆ, ಶಿಬಿರ ಸಂಪನ್ಮೂಲ ವ್ಯಕ್ತಿ ಗೌರಮ್ಮ ಉಪಸ್ಥಿತರಿದ್ದರು.