ಕಳಸ: ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ಹೊಂದಿರುವವರಿಗೆ ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ ಇಲಾಖೆಯಿಂದ ಯಾವುದೇ ಸೌಲಭ್ಯ ಹಾಗೂ ಮಾಹಿತಿ ನೀಡುತ್ತಿಲ್ಲ ಎಂದು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ಪ್ರತಿನಿಧಿಗಳು ಆರೋಪಿಸಿದರು.
ಶುಕ್ರವಾರ ಕಾಫಿ ನರ್ಸರಿ ಉದ್ಘಾಟನೆ ಮತ್ತು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ಪ್ರತಿನಿಧಿಗಳೊಂದಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಪ್ರತಿನಿಧಿಗಳು ಪ್ರಸ್ತಾಪಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಡಕಟ್ಟು ಜನರಿಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಫಲಾನುಭವಿಗಳ ಆಯ್ಕೆಯಲ್ಲಯೂ ತಾರತಮ್ಯ ಮಾಡಲಾಗುತ್ತದೆ. ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯವನ್ನು ನೀಡಿಲ್ಲ ಎಂದು ದೂರಿದರು.
ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ಹೊಂದಿರುವವರಿಗೆ ಸೌಲಭ್ಯಗಳು ಸಿಗದಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಹೇಳಿದರು. ಯೋಜನೆಗಳ ಬಗ್ಗೆ ಸಂಘಕ್ಕೆ ಮಾಹಿತಿ ನೀಡಲು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ಸೂಚಿಸಿದರು.
ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ನೋಂದಣಿ ಪ್ರಮಾಣ ಪತ್ರವನ್ನು ಸಂಘದ ಅಧ್ಯಕ್ಷ ಓಬಯ್ಯ ಅವರಿಗೆ ಹಸ್ತಾಂತರಿಸಿದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿರ್ದೇಶಕ ಸಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ನಿರ್ದೇಶಕ ಹಟ್ಟಿಯಪ್ಪ, ಡಾ.ಪ್ರಭುಗೌಡ, ಯೋಜನೆ ನಿರ್ವಾಹಕ ತ್ರಿಭುವನ್, ನೀಲಕಂಠ, ಅನಿಲ್ಕುಮಾರ್, ಸಂತೋಷ್, ನಿರ್ದೇಶಕ ಕಾಶಿನಾಥ್, ಕಾರ್ಯದರ್ಶಿ ಸುರೇಶ್ ಇದ್ದರು.