ಜಿಲ್ಲೆ

ಬುಡಕಟ್ಟು ನಾಯಕರಿಗೆ ಕಾಡುಗಳ್ಳ ಎಂದು ಅಪಮಾನ: ರಾಜ್ಯ ವಾಲ್ಮೀಕಿ ಕ್ಷತ್ರಿಯ ನಾಯಕ ಮಹಾಸಭಾ ಆರೋಪ

ಮೈಸೂರು: ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ನಂಜರಾಜ ಅರಸ್ ಅವರು ತಮ್ಮ ಹೇಳವ್ವಾ ಚಾಮುಂಡಾ ಯಾರು ನೀನು? ಎಂಬ ಕೃತಿಯಲ್ಲಿ ಮೈಸೂರು ನಗರದ ಸಂಸ್ಥಾಪಕ ಹಾಗೂ ಮೂಲ ನಿವಾಸಿ ದೊರೆ, ಬುಡಕಟ್ಟು ನಾಯಕ ಕಾರ್ಗಳ್ಳಿ ಮಾರನಾಯಕರನ್ನು ಕಾಡುಗಳ್ಳ ಎಂದು ಅಪಮಾನಿಸಲಾಗಿದೆ ಎಂದು ರಾಜ್ಯ ವಾಲ್ಮೀಕಿ ಕ್ಷತ್ರಿಯ ನಾಯಕ ಮಹಾಸಭಾ ಪದಾಧಿಕಾರಿ ಪಾಳೇಗಾರ್ ದೀಪಕ್ ದೂರಿದರು.

ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅವರು ಈ ರೀತಿ ಹೇಳಿರುವುದಾಗಿ ಪ್ರೊ.ನಂಜರಾಜ ಅರಸ್ ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಪುಸ್ತಕವನ್ನು ನಿಷೇಧಿಸಿ, ಈ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಮೂಲ ನಿವಾಸಿ ದೊರೆ, ಪಾಳೇಗಾರ ಮಾರನಾಯಕ ಇತಿಹಾಸ ಸಂರಕ್ಷಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಇಬ್ಬರ ವಿರುದ್ಧ ಕ್ರಮಕ್ಕಾಗಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ಕಾನೂನು ಹೋರಾಟ ಸಹಾ ನಡೆಸಲಾಗುವುದು. ಉತ್ತನಹಳ್ಳಿ ದೇವಾಲಯದ ಜೀರ್ಣೋದ್ಧಾರ ನೆಪದಲ್ಲಿ ದೇವಾಲಯದ ಸುಖನಾಸಿಯಲ್ಲಿದ್ದ ಇನ್ನಿತರರ ಪರಿವಾರ ದೇವತೆಗಳೊಂದಿಗೆ ರಾರಾಜಿಸಿದ್ದ ಮಾರನಾಯಕರ ಸ್ಮಾರಕ ಶಿಲ್ಪವನ್ನು ಶಾಸ್ತ್ರದ ನೆಪವೊಡ್ಡಿ ದೇವಾಲಯದಿಂದ ತೆಗೆದಿರಿಸಿ ಅಪಮಾನಿಸಲಾಗಿದೆ. ಈ ಬಗ್ಗೆ ಮನವಿ ಮಾಡಿದರೂ ದೇವಾಲಯ ಕ್ರಮ ಕೈಗೊಂಡಿಲ್ಲ ಎಂದು ಬೇಸರಿಸಿದರು.

ಸಮಿತಿಯ ಆರ್.ನಾರಾಯಣ ಬದನಗುಪ್ಪೆ, ಸಾಹುಕಾರ್ ಹುಂಡಿ ಸಿ.ಮಹದೇವು, ರವಿಕುಮಾರ್ ಎಸ್.ಹಂಚ್ಯಾ, ಆರ್.ಅಮೃತನಾಯಕ್, ಸತೀಶ್ ಬಾಬು ಇನ್ನಿತರರು ಇದ್ದರು.