ಜಿಲ್ಲೆ

ಸೌಲಭ್ಯ ಪಡೆಯಲಿ ಬುಡಕಟ್ಟು ಸಮುದಾಯ

ವೀರೇಶ ಸೌದ್ರಿ

ಬ್ಯಾಡಗಿ: ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಬುಡಕಟ್ಟು ಸಮುದಾಯದವರು ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ದುಮ್ಮಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಾದ್ಯಂತ ಸಂವಿಧಾನದ ಆಶಯದಂತೆ ಹಿಂದುಳಿದ ಎಲ್ಲ ವರ್ಗಗಳಿಗೂ ಸರ್ಕಾರ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿಯಾನ ನಡೆಸುವ ಮೂಲಕ ಅವರಿಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಗಿದೆ ಎಂದರು.

ತಾಲೂಕಿನ ಪ್ರತಿಯೊಂದು ಗ್ರಾಮದ ಪರಿಶಿಷ್ಟ ಜಾತಿ, ಪಂಗಡದವರಿಗೆ ಅಂಬೇಡ್ಕರ್, ವಾಲ್ಮೀಕಿ ಸೇರಿದಂತೆ ವಿವಿಧ ಸಮುದಾಯ ಭವನ, ಕಲ್ಯಾಣ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಮಾತನಾಡಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ದೇಹಲಿ ಆಶ್ರಯದಲ್ಲಿ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ವಿವಿಧ ಯೋಜನೆ ಜಾರಿಗೊಳಿಸಿದೆ. 15 ದಿನ ಯೋಜನೆಯ ಅರಿವು ಮೂಡಿಸಲು ಗ್ರಾಮೀಣ ಮಟ್ಟದಲ್ಲಿ ಶಿಬಿರ, ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತಹಸೀಲ್ದಾರ್ ಪೀರೋಜ್‌ಷಾ ಸೋಮನಕಟ್ಟಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಬಸವರಾಜ ಬೆಳಕೇರಿ, ಪಿಡಿಒ ಎಂ.ಎ. ತಹಸೀಲ್ದಾರ, ಘಾಳಪೂಜಿ ಗ್ರಾಪಂ ಅಧ್ಯಕ್ಷ ಕೀರೇಶ ಕಟ್ಟಿಮನಿ, ಮಂಜಣ್ಣ ದುಮ್ಮಿಹಾಳ, ನಾಗರಾಜ ಅಂಗರಗಟ್ಟಿ, ಶಿವನಗೌಡ್ರ ಪಾಟೀಲ, ಮಹದೇವಪ್ಪ ಓಲೇಕಾರ, ರುದ್ರಪ್ಪ ಹೊಂಕಣ, ಲಿಂಗರಾಜ ಕುಮ್ಮೂರು, ಇಸ್ಮಾಯಿಲ್ ಸೂಡಂಬಿ ಇತರರಿದ್ದರು.