ಜಿಲ್ಲೆ

ಟ್ರಯಾಂಗಲ್ ಲವ್ ಸ್ಟೋರಿ: ಸ್ನೇಹಿತನನ್ನೇ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಗ್ಯಾಂಗ್

ಬೆಂಗಳೂರು: ಯುವತಿ ವಿಚಾರಕ್ಕೆ ಟೆಂಪೋ ಟ್ರಾವೆಲರ್ (ಟಿಟಿ) ಚಾಲಕನನ್ನು ಸ್ನೇಹಿತರೇ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಬೈಯಪ್ಪನಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನೆಲಮಂಗಲ ಸಮೀಪದ ನರಸಿಂಹಯ್ಯ ಲೇಔಟ್ ನಿವಾಸಿ ರವಿಕುಮಾರ್ (30) ಕೊಲೆಯಾದ ಟಿಟಿ ಚಾಲಕ. ಕೃತ್ಯ ಎಸಗಿದ ಪೀಣ್ಯದ ಲೋಕೇಶ್, ರಂಜಿತ್ ಮತ್ತು ಸಚಿನ್ ಎಂಬುವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನೆಲಮಂಗಲದಲ್ಲಿ ಪತ್ನಿ, ಮಗನ ಜತೆ ನೆಲೆಸಿದ್ದ ರವಿಕುಮಾರ್, ಮಹದೇವಪುರದ ಸಾಫ್ಟ್​ವೇರ್​ ಕಂಪನಿಗೆ ಟಿಟಿ ಬಾಡಿಗೆ ಬಿಟ್ಟು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೀಣ್ಯದಲ್ಲಿ ಒಬ್ಬನೇ ನೆಲೆಸಿದ್ದ ಲೋಕೇಶ್, ಸಹ ಟಿಟಿ ಚಾಲಕನಾಗಿದ್ದ. ಇಬ್ಬರು ಸ್ನೇಹಿತರಾಗಿದ್ದರು.
4 ವರ್ಷಗಳಿಂದ ಲೋಕೇಶ್, ಯುವತಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಆಕೆ ರವಿಕುಮಾರ್ ಜತೆ ಪ್ರವಾಸಕ್ಕೆ ಹೋಗಿದ್ದಳು. ಈ ವಿಚಾರ ತಿಳಿದ ಲೋಕೇಶ್, ಸ್ನೇಹಿತ ರವಿಕುಮಾರ್‌ನನ್ನು ಕರೆದು ಪ್ರಶ್ನೆ ಮಾಡಿದಾಗ ‘ಆಕೆಯೇ ನನ್ನ ಜತೆಗೆ ಪ್ರವಾಸಕ್ಕೆ ಬಂದರೇ ನಾನು ಏನು ಮಾಡಲಿ?’ ಎಂದು ಜವಾಬ್ ಕೊಟ್ಟಿದ್ದ. ಇದಕ್ಕೆ ಕೆರಳಿದ ಲೋಕೇಶ್, ತನ್ನ ಸ್ನೇಹಿತರ ಜತೆ ಸೇರಿ ನ.19ರ ತಡರಾತ್ರಿ 12.30ರಲ್ಲಿ ಹಳೇ ಮದ್ರಾಸ್ ರಸ್ತೆಯಲ್ಲಿ ರವಿಕುಮಾರ್ ಟಿಟಿ ವಾಹನವನ್ನು ತಡೆದು, ಮತ್ತೊಂದು ವಾಹನದಲ್ಲಿ ಅಪಹರಣ ಮಾಡಿದ್ದರು.

ನ.20ರಂದು ಪತಿ ಸಂಪರ್ಕಕ್ಕೆ ಸಿಗದೆ ಇದ್ದಾಗ ರವಿಕುಮಾರ್ ಪತ್ನಿ ಶ್ರುತಿ, ಭಯಗೊಂಡು ಪತಿಯ ಸ್ನೇಹಿತ ರಂಜಿತ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ರಂಜಿತ್, ನನಗೆ ಗೊತ್ತಿಲ್ಲ ಎಂದು ಕಂಪನಿಯ ಟ್ರಾವೆಲ್ಸ್ ವಿಭಾಗದ ಮುಖ್ಯಸ್ಥ ನಿರ್ಮಲ್‌ಗೆ ಕಾಲ್ ಕಾನ್ಫರೆನ್ಸ್ ಮಾಡಿದ್ದನು. ಆಗ ನಿರ್ಮಲ್, ‘ನ.19ರ ರಾತ್ರಿ 12.30ರಲ್ಲಿ ನಾಲ್ವರು ದುಷ್ಕರ್ಮಿಗಳು ಟಿಟಿ ಅಡ್ಡಗಟ್ಟಿ ನನ್ನ ಬಳಿಯಿದ್ದ ಹಣ ಕಸಿದುಕೊಂಡು ರವಿಕುಮಾರ್‌ನನ್ನು ಅಪಹರಣ ಮಾಡಿದರು. ನಾನು ತಪ್ಪಿಸಿಕೊಂಡು ಮನೆಗೆ ಬಂದಿರುವುದಾಗಿ ಹೇಳುತ್ತಿದಂತೆ ರಂಜಿತ್, ಕಾನ್ಫರೇನ್ಸ್ ಕರೆಯನ್ನು ಕಟ್ ಮಾಡಿದ್ದಾನೆ. ಭಯಗೊಂಡ ಶ್ರುತಿ, ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ಎಲ್ಲೆಡೆ ಬಲೆ ಬೀಸಿ ಲೋಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.

ಅಪಹರಣ ಮಾಡಿದ ಬಳಿಕ ಲೋಕೇಶ್, ಗ್ಯಾಂಗ್ ರವಿಕುಮಾರ್‌ನನ್ನು ಬನ್ನೇರುಘಟ್ಟದ ಕೋಳಿ ಫಾರಂ ಬಳಿ ಕರೆದೊಯ್ದು ಹಲ್ಲೆ ನಡೆಸಿದ್ದರು. ರವಿಕುಮಾರ್ ‘ಯಾವುದೇ ಕಾರಣಕ್ಕೂ ಯುವತಿಯನ್ನು ಬಿಡುವುದಿಲ್ಲ’ ಎಂದು ಹಠ ಮಾಡಿದ್ದಾಗ ಕುಪಿತಗೊಂಡು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಶವವನ್ನು ಪೊದೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈತ ಕೊಟ್ಟ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ವಶಕ್ಕೆ ಪಡೆದು ಶವವನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾರಿ ತಪ್ಪಿಸಿದ್ದ ಸ್ನೇಹಿತ: ರವಿಕುಮಾರ್ ಪತ್ನಿ, ತನ್ನ ಪತಿ ಬಗ್ಗೆ ವಿಚಾರಿಸಲು ರಂಜಿತ್‌ಗೆ ಕರೆ ಮಾಡಿದಾಗ ಸುಳ್ಳು ಹೇಳಿ ದಾರಿ ತಪ್ಪಿಸಿದ್ದ. ‘ನಿಮ್ಮ ಗಂಡ ಚಿಕ್ಕಮಗಳೂರು ಟ್ರಿಪ್ ಇದೆ ಎಂದು ಹೇಳುತ್ತಿದ್ದರು. ಬಹುಶಃ ಟ್ರಿಪ್ ಹೋಗಿರಬಹುದು’ ಎಂದು ಹೇಳಿದ್ದ. ಇದನ್ನು ನಂಬಿದ ರವಿಕುಮಾರ್ ಪತ್ನಿ ಶ್ರುತಿ ಸುಮ್ಮನಾಗಿದ್ದರು. ಎರಡು ದಿನಗಳು ಕಳೆದರೂ ಪತಿ ಮನೆಗೆ ಬಾರದೆ ಇದ್ದಾಗ ಠಾಣೆಗೆ ಹೋಗಿ ದೂರು ನೀಡಿದ್ದರು. ಈ ವೇಳೆ ರಂಜಿತ್, ಸಹ ದೂರು ಕೊಡಲು ಸಹಾಯ ಮಾಡಿದ್ದ.