ಜಿಲ್ಲೆ

ಡಯಾಲಿಸಿಸ್ ಕೇಂದ್ರದಲ್ಲಿ ಪರೀಕ್ಷಾರ್ಥ ಪ್ರಯೋಗಕ್ಕೆ ಚಾಲನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ಇಲ್ಲಿನ ಸಮದಾಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಕರ್ನಾಟಕ ಸರ್ಕಾರ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಳವಡಿಸಲಾದ ಉಚಿತ ಡಯಾಲಿಸಿಸ್ ಯಂತ್ರಗಳಿಗೆ ಪೂಜಾ ವಿಧಿ-ವಿಧಾನ ನೆರವೇರಿಸಿ ಡಯಾಲಿಸಿಸ್ ಯಂತ್ರಗಳ ಪರೀಕ್ಷಾರ್ಥ ಪ್ರಯೋಗ ನಡೆಸುವ ಮೂಲಕ ಟ್ರಯಲ್ ರನ್‌ಗೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಮಣಿಪಾಲ ಆಸ್ಪತ್ರೆ ನೆರವಿನೊಂದಿಗೆ ಪಿಪಿಪಿ ಮಾದರಿಯಲ್ಲಿ ಡಯಾಲಿಸಿಸ್ ಸೇವೆ ಒದಗಿಸಲು ಪ್ರಯತ್ನ ಆಗಿತ್ತಾದರೂ ಸರ್ಕಾರ ಅದಕ್ಕೆ ಅನುಮತಿ ನೀಡದ ಕಾರಣ ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ಡಯಾಲಿಸಿಸ್ ಸೇವೆ ಪ್ರಾರಂಭಿಸಲಾಗಿತ್ತು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಕಾರ್ಯಾರಂಭಕ್ಕೆ ಎದುರಾಗಿದ್ದ ನೀರಿನ ಸಮಸ್ಯೆ ನಿವಾರಿಸಿಕೊಂಡು ಉಚಿತ ಡಯಾಲಿಸಿಸ್ ಸೇವೆ ಆರಂಭಗೊಂಡಿರುವುದರಿಂದ ಬೈಂದೂರಿನ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್, ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ಉದ್ಯಮಿ ಸೂಲಿಯಣ್ಣ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಅನಿತಾ ಆರ್.ಕೆ., ಭಾನುಮತಿ ಜಯಾನಂದ, ಆಸ್ಪತ್ರೆ ಸಿಬ್ಬಂದಿ ವರ್ಗ, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.

ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಪ್ರಸ್ತಾವನೆ

ತಾಲೂಕು ಆಸ್ಪತ್ರೆ ಅನ್ನುವುದು ಬಹು ದೊಡ್ಡ ಬೇಡಿಕೆ. ಈ ಬಗ್ಗೆ ಈಗಾಗಲೇ ಜಿಲ್ಲೆಯಿಂದ ಪ್ರಸ್ತಾವನೆ ಹೋಗಿದೆ. ಕನಿಷ್ಠ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಲು ಆರೋಗ್ಯ ಸಚಿವರಿಗೂ ಮನವಿ ಮಾಡಲಾಗಿದೆ. ತಾಲೂಕು ಆಸ್ಪತ್ರೆ ಉದ್ದೇಶಕ್ಕೆ ಕಂದಾಯ ಇಲಾಖೆ ಮೂಲಕ ಜಾಗ ಮಂಜೂರು ಮಾಡಿಸಲಾಗಿದೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಬೈಂದೂರು ಅಗ್ನಿಶಾಮಕ ಕಟ್ಟಡ, ಬಸ್ ನಿಲ್ದಾಣ ಕಟ್ಟಡವನ್ನು ಶೀಘ್ರ ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಲಾಗುವುದು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟಿಸಲು ಸಾರಿಗೆ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.