ಬೆಂಗಳೂರು: ಬಹುನಿರೀಕ್ಷಿತ ಕೊಯಮತ್ತೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಪ್ರಾಯೋಗಿಕ ಸಂಚಾರ ನಡೆಸಿತು.
ತಮಿಳುನಾಡಿನ ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಹೊರಟ ರೈಲು, ಬೆಳಗ್ಗೆ 10.38ರ ಹೊತ್ತಿಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಿತು. ಪರಿಶೀಲನಾ ಸಂಚಾರದ ವೇಳೆ ಮಾರ್ಗದ ಸುರಕ್ಷತೆ, ಕೊನೆಯ ನಿಲ್ದಾಣವನ್ನು ತಲುಪಲು ತೆಗೆದುಕೊಳ್ಳುವ ಸಮಯ ಇತ್ಯಾದಿಗಳನ್ನು ಪರೀಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಬೆಂಗಳೂರು ಕಂಟೋನ್ಮೆಂಟ್ಗೆ ರೈಲು ತಲುಪುತ್ತಿದ್ದಂತೆ, ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಯೋಗೇಶ್ ಮೋಹನ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೊಯಮತ್ತೂರು-ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿ.30ರಂದು ಪ್ರಧಾನಿ ವರ್ಚುವಲ್ ಕಾರ್ಯಕ್ರಮ ನಡೆಸಿ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಗಳೂರು-ಧಾರವಾಡ ಮತ್ತು ಚೆನ್ನೈ-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ.