ಬೆಂಗಳೂರು: ಪರಿಸರ ರಕ್ಷಣೆ ದೃಷ್ಟಿಯಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿದ್ದು, ಅದರ ಭಾಗವಾಗಿ ಖಾಸಗಿ ಸಂಸ್ಥೆ ನೀಡಿರುವ ಒಂದು ಬಸ್ನ ಪ್ರಾಯೋಗಿಕ ಸಂಚಾರಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಚಾಲನೆ ನೀಡಿದರು.
ನಂತರ ಲಕ್ಷ್ಮಣ ಸವದಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿ ಹಲವು ಅಧಿಕಾರಿಗಳ ಜತೆ ಶಾಂತಿನಗರದಿಂದ ವಿಧಾನಸೌಧವರೆಗೆ ನೂತನ ಬಸ್ನಲ್ಲಿ ಸಂಚರಿಸಿದರು. ವಿಧಾನಸೌಧದ ಆವರಣದಲ್ಲಿ ಬಸ್ ಒಂದು ಸುತ್ತು ಹಾಕಿದ್ದು ವಿಶೇಷ. ವಿಧಾನಸೌಧಕ್ಕೆ ಬರುತ್ತಿದ್ದಂತೆ ಚಾಲಕನ ಆಸನದಲ್ಲಿ ಕುಳಿತ ಲಕ್ಷ್ಮಣ ಸವದಿ, ಬಿಎಂಟಿಸಿ ಮತ್ತು ಬಸ್ ಮಾಲೀಕತ್ವ ಸಂಸ್ಥೆಯ ಅಧಿಕಾರಿಗಳಿಂದ ಬಸ್ ಕುರಿತು ಮಾಹಿತಿ ಪಡೆದರು.
ರಾಜ್ಯ- ಕೇಂದ್ರ ಸರ್ಕಾರಗಳ ಪಾಲುದಾರಿಕೆ: ಕೇಂದ್ರ ಸರ್ಕಾರದ ‘ಫೇಮ್ ಇಂಡಿಯಾ- 2’ ಯೋಜನೆಯಡಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿದೆ. ಅದರ ಭಾಗವಾಗಿ ಒಲೆಕ್ಟ್ರಾ ಗ್ರೀನ್ಟೆಕ್ ಸಂಸ್ಥೆಯು ಎಲೆಕ್ಟ್ರಿಕ್ ಬಸ್ ನೀಡಿದೆ. ಅದರ ಕಾರ್ಯಕ್ಷಮತೆ, ಗುಣಮಟ್ಟವನ್ನು ಪರೀಕ್ಷಿಸಲಾಯಿತು.
ಮುಂದಿನ 30 ದಿನಗಳ ಕಾಲ ಈ ವಿದ್ಯುತ್ ಬಸ್ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿದೆ. ಪ್ರತಿ ಬಸ್ಗೆ ಕೇಂದ್ರ ಸರ್ಕಾರ 55 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ ರೂ.33.33 ಲಕ್ಷ ರೂ. ನೀಡಲಿದೆ. ಒಟ್ಟು 88.33 ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬಿಎಂಟಿಸಿಯಷ್ಟೇ ಅಲ್ಲದೆ, ಕೆಎಸ್ಸಾರ್ಟಿಸಿ ಮತ್ತು ಎನ್ಇಕೆಆರ್ಟಿಸಿಗೂ ತಲಾ 50 ವಿದ್ಯುತ್ ಬಸ್ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಬಿಎಂಟಿಸಿಗೆ ಹೆಚ್ಚುವರಿಯಾಗಿ 90 ಮಿನಿ ವಿದ್ಯುತ್ ಬಸ್ ಖರೀದಿಸಲಾಗುತ್ತದೆ.
ಶ್ಲಾಘಿಸಿದ ಸಿಎಂ: ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಲಕ್ಷ್ಮಣ ಸವದಿ ಮತ್ತು ಬಿಎಂಟಿಸಿ ಅಧಿಕಾರಿಗಳ ಕ್ರಮವನ್ನು ಮುಖ್ಯಮಂತ್ರಿ ಬಿಎಸ್ವೈ ಶ್ಲಾಘಿಸಿದರು.
ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆಯುತ್ತಿರುವುದರಿಂದ ನಿಗಮಕ್ಕೆ ಹೊರೆಯಾಗುವುದಿಲ್ಲ. ಕಿ.ಮೀ. ಲೆಕ್ಕದಲ್ಲಿ ಬಸ್ ಪೂರೈಸುವ ಸಂಸ್ಥೆಗೆ ಹಣ ಪಾವತಿಸಲಾಗುವುದು. ಸರ್ಕಾರಗಳ ಸಹಯೋಗದಲ್ಲಿ ಬಸ್ ಪಡೆಯಲಾಗುತ್ತಿದೆ.
| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಸದ್ಯ ಒಂದು ಬಸ್ ಪ್ರಾಯೋಗಿಕ ಸಂಚಾರಕ್ಕೆ ಪಡೆಯಲಾಗಿದ್ದು, ಸಮರ್ಪಕವಾಗಿದ್ದರೆ ಇನ್ನಷ್ಟು ಬಸ್ಸೇರ್ಪಡೆ ಮಾಡಲಾಗುವುದು. | ಲಕ್ಷ್ಮಣ ಸವದಿ ಸಾರಿಗೆ ಸಚಿವ