ಭರತ್ ಶೆಟ್ಟಿಗಾರ್ ಮಂಗಳೂರು
ಕರೊನಾ ವೈರಸ್ ಭೀತಿ ಚಾರಣಿಗರನ್ನು ಕಟ್ಟಿ ಹಾಕಿದೆ. ಅಧ್ಯಯನ, ಮನೋಲ್ಲಾಸ, ಮೋಜು ಮಸ್ತಿಗೆ ಕಾಡು-ಗುಡ್ಡಗಳಿಗೆ ಚಾರಣ ಮಾಡುತ್ತಿದ್ದವರು ಒಂದೂವರೆ ತಿಂಗಳಿನಿಂದ ಘಟ್ಟಕ್ಕೆ ಕಾಲಿಟ್ಟಿಲ್ಲ. ಸರ್ಕಾರದ ಆದೇಶ ಮೀರಿ ಕೆಲವರು ಚಾರಣಕ್ಕೆ ಯತ್ನಿಸಿದರೂ, ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ.
ಸಾಮಾನ್ಯವಾಗಿ ಮಳೆಗಾಲ ಕೊನೆಯಾಗುತ್ತಿದ್ದಂತೆ ಪಶ್ಚಿಮ ಘಟ್ಟದ ವಿವಿಧ ಬೆಟ್ಟಗಳಿಗೆ ಟ್ರೆಕ್ಕಿಂಗ್ ಮಾಡುತ್ತಾರೆ. ಕರಾವಳಿ ಜಿಲ್ಲೆಯವರು ಮಾತ್ರವಲ್ಲದೆ, ಬೆಂಗಳೂರು, ಮೈಸೂರು ಸೇರಿದಂತೆ ಬಯಲು ಸೀಮೆಯಿಂದಲೂ ಜನರು ಬರುತ್ತಾರೆ. ಇಲ್ಲಿ ಪಶ್ಚಿಮ ಘಟ್ಟವೇ ಅಧ್ಯಯನಕ್ಕೆ ಪೂರಕ ವಿಷಯ. ನದಿ ಮೂಲದಲ್ಲಿ ನೀರಿನ ಪ್ರಮಾಣ, ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿಯುವುದು, ಗಿಡ-ಮರ, ಪ್ರಾಣಿ-ಪಕ್ಷಿ ಜೀವ ಜಂತುಗಳ ಅಧ್ಯಯನ ಮೊದಲಾದ ವಿಚಾರದಲ್ಲಿ ಅಧ್ಯಯನ ನಡೆಯುತ್ತದೆ.
ವಿದ್ಯಾರ್ಥಿಗಳ ಪ್ರವಾಸಕ್ಕೂ ಬ್ರೇಕ್
ಕರೊನಾ ಲಾಕ್‌ಡೌನ್ ವಿದ್ಯಾರ್ಥಿಗಳ ಅಧ್ಯಯನ ಚಾರಣಕ್ಕೂ ತಡೆಯೊಡ್ಡಿದೆ. ಕರಾವಳಿಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಹ್ಯಾದ್ರಿ ಸಂಚಯ ತಂಡದ ಚಾರಣಿಗ ದಿನೇಶ್ ಹೊಳ್ಳ ನೇತೃತ್ವದಲ್ಲಿ ಪಶ್ಚಿಮ ಘಟ್ಟದಲ್ಲಿರುವ ನದಿ ಮೂಲಗಳಿಗೆ ಪ್ರತಿವರ್ಷ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದರು. ಪ್ರಕೃತಿಯ ಕುರಿತು ತಿಳಿಯಲು ಇದೊಂದು ಅವಕಾಶವಾಗಿತ್ತು.
ಅಕ್ರಮ ಚಟುವಟಿಕೆಗಳಿಗೆ ತಡೆ ಈ ಬಾರಿ ಚಾರಣಕ್ಕೆ ಅವಕಾಶ ಸಿಗದಿರುವುದು ಒಳ್ಳೆಯದೇ ಆಯಿತು ಎನ್ನುವ ಅಭಿಪ್ರಾಯವೂ ನೈಜ ಚಾರಣಿಗರಲ್ಲಿದೆ. ಕಾರಣ ಪ್ರತೀ ವರ್ಷ ಚಾರಣ ನೆಪದಲ್ಲಿ ಸಾಕಷ್ಟು ಮಂದಿ ಪಶ್ಚಿಮ ಘಟ್ಟದ ವಿವಿಧ ಬೆಟ್ಟಗಳಿಗೆ ತೆರಳಿ ಅಲ್ಲಿ ಕುಡಿದು, ಮೋಜು ಮಸ್ತಿಯಲ್ಲಿ ತೊಡಗಿ ಪರಿಸರವನ್ನು ಹಾಳು ಮಾಡುತ್ತಿದ್ದರು. ಪ್ರಾಣಿ ಬೇಟೆ, ಕಾಡುತ್ಪತ್ತಿಯ ನಾಶ ಸೇರಿದಂತೆ, ಕಾಡಿಗೆ ಬೆಂಕಿ ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಒಂದೆರಡು ಸಣ್ಣ ಬೆಂಕಿ ಪ್ರಕರಣಗಳು ಹೊರತುಪಡಿಸಿ, ಅರಣ್ಯದಲ್ಲಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿಲ್ಲ. ಘಟ್ಟದ ತಪ್ಪಲು ಶಾಂತವಾಗಿದ್ದು, ಆ ಪ್ರದೇಶದಲ್ಲಿ ವಾಸವಾಗಿರುವ ಜನರೂ ನೆಮ್ಮದಿಯಿಂದ ಇದ್ದಾರೆ ಎನ್ನುತ್ತಾರೆ ಪ್ರಕೃತಿ ಪ್ರಿಯ ಚಾರಣಿಗರು.
25 ವರ್ಷಗಳಿಂದ ಪಶ್ಚಿಮ ಘಟ್ಟದ ವೇದನೆ, ರೋದನಕ್ಕೆ ಕಿವಿ ಆಗುತ್ತಿದ್ದ ನಮ್ಮ ಚಾರಣ ತಂಡಕ್ಕೆ ಈ ಬಾರಿ ಕರೊನಾ ಲಾಕ್‌ಡೌನ್‌ನಿಂದಾಗಿ ಬೆಟ್ಟ, ಕಾನನಕ್ಕೆ ಚಾರಣ ಮಾಡದಂತಾಗಿದೆ. ಲಾಕ್‌ಡೌನ್ ಎಲ್ಲವನ್ನೂ ಸ್ತಬ್ಧಗೊಳಿಸಿದೆ. ಒಂದು ಲೆಕ್ಕದಲ್ಲಿ ಈ ಲಾಕ್‌ಡೌನ್ ಪಶ್ಚಿಮಘಟ್ಟಕ್ಕೆ ಒಳ್ಳೆಯದೇ ಆಯಿತು. ಒಂದಷ್ಟು ಚಾರಣಿಗರ, ಕಾಡು ಕದಡುವವರ, ಮೋಜು ಮಸ್ತಿಗರ, ಕಾಡುತ್ಪತ್ತಿ ಅರಸುವವರ, ಬೇಟೆ, ಬೆಂಕಿ ಇಡುವವರ ಕಾಡು ಸಂಚಾರ ಕಡಿಮೆ ಆಗಿ ಪಶ್ಚಿಮ ಘಟ್ಟ ನೆಮ್ಮದಿಯ ನಿಟ್ಟುಸಿರು ಬಿಡುತ್ತಿವೆ. - ದಿನೇಶ್ ಹೊಳ್ಳ, ಚಾರಣಿಗ, ಪರಿಸರ ಪ್ರೇಮಿ, ಮಂಗಳೂರ