ಜಿಲ್ಲೆ

ದೇವೀರಮ್ಮ ಬೆಟ್ಟ ಹತ್ತಲು ಭಕ್ತರಿಗೆ ನಿರ್ಬಂಧ

madikerimailmanju

ಚಿಕ್ಕಮಗಳೂರು: ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ವೇಳೆ ಹೊರಗಿನ ಭಕ್ತರಿಗೆ ತಾಲೂಕಿನ ಬಿಂಡಿಗಾ ಮಲ್ಲೇನಹಳ್ಳಿ ಶ್ರೀ ದೇವೀರಮ್ಮ ಬೆಟ್ಟ ಹತ್ತಲು ಅವಕಾಶ ನಿರ್ಬಂಧಿಸಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಬಿಂಡಿಗದ ಶ್ರೀ ದೇವೀರಮ್ಮನವರ ದೇವಸ್ಥಾನ ಹಾಗೂ ಬೆಟ್ಟದಲ್ಲಿ ನ.13 ರಿಂದ 17ರವರೆಗೆ ದೇವಿಯವರಿಗೆ ಸಂಪ್ರದಾಯದ ಪ್ರಕಾರ ಎಲ್ಲ ಪೂಜಾ ಪದ್ಧತಿಗಳು ನಡೆಯಲಿವೆ. ಹಿಂದಿನಿಂದ ದೇವಾಲಯದ ಪೂಜಾ ಪದ್ಧತಿ ನಡೆಸಿಕೊಂಡು ಬಂದಿರುವ ಮೂಲ ಕುಟುಂಬದವರ ಜತೆಗೆ ಅರ್ಚಕರು ಮಾತ್ರ ಬೆಟ್ಟ ಹತ್ತಿ ದೇವಿಗೆ ಪೂಜೆ, ಪುನಸ್ಕಾರ ನೆರವೇರಿಸಲಿದ್ದಾರೆ. ಹೊರಗಿನ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ ಎಂದು ಸಮಿತಿ ಮಾಹಿತಿ ನೀಡಿದೆ.

ಬೆಟ್ಟದ ಕೆಳಭಾಗದಲ್ಲಿರುವ ಬಿಂಡಿಗದ ದೇವೀರಮ್ಮನವರ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ದೇವಿಯವರ ದರ್ಶನ ಪಡೆಯಬಹುದು. ಆದರೆ ಹಣ್ಣು ಕಾಯಿ ಮಾಡಿಸುವಂತಿಲ್ಲ. ಕರೊನಾ ನಿಯಂತ್ರಣದ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ನಿಯಮಗಳ ಪ್ರಕಾರ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿ ಹೇಳಿದೆ.