ಜಿಲ್ಲೆ

ಕಟ್ಟಡ, ರಸ್ತೆ ನಿರ್ಮಾಣ ಹೆಸರಲ್ಲಿ ಮರಗಳ ಮಾರಣಹೋಮ

ಲಲಾಟಾಕ್ಷ ಎಸ್

ಬೇಲೂರು: ಹಸಿರು ಭೂಮಿ ಪ್ರತಿಷ್ಠಾನದಿಂದ ಪಟ್ಟಣದ 6ನೇ ವಾರ್ಡ್‌ನ ಹೊಳೆ ಬೀದಿಯಲ್ಲಿರುವ ಉದ್ಯಾನವನದಲ್ಲಿ ಬುಧವಾರ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.


ಹಸಿರು ಭೂಮಿ ಪ್ರತಿಷ್ಠಾನದ ತಾಲೂಕು ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕೆ ಇಂದು ಅರಣ್ಯ ನಾಶವಾಗುತ್ತಿದೆ. ನಾವೆಲ್ಲರೂ ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಆದರೆ ಕಟ್ಟಡ, ರಸ್ತೆ ನಿರ್ಮಾಣದ ಹೆಸರಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವುದರಿಂದ ಪ್ರಕೃತಿಯ ಮೇಲುಂಟಾಗುತ್ತಿರುವ ದುಷ್ಪರಿಣಾಮವನ್ನು ನಾವು ಈಗಾಗಲೇ ಎದುರಿಸುತ್ತಿದ್ದೇವೆ. ಆದ್ದರಿಂದ ನಾವು ಈ ಬಾರಿಯ ನಮ್ಮ ಭೂಮಿ ನಮ್ಮ ಭವಿಷ್ಯ ಎಂಬ ಘೋಷ ವಾಕ್ಯದಂತೆ ಗಿಡಗಳನ್ನು ಬೆಳೆಸೋಣ ಎಂದರು.


ಶಾಲಾ ಮಕ್ಕಳಿಗೆ ಅವರು ಹುಟ್ಟಿದ ದಿನದಂದು ಒಂದೊಂದು ಗಿಡಗಳನ್ನು ನೆಡುವಂತೆ ಸಲಹೆ ನೀಡುವುದು ಉತ್ತಮ. ಈ ವರ್ಷ ಹೆಚ್ಚು ಬಿಸಿಲಿನ ತಾಪದಿಂದ ಏನೆಲ್ಲ ಅನುಭವಿಸಿದ್ದೇವೆ ಎಂಬುದರ ಜತೆಗೆ ಪರಿಸರ ನಾಶದಿಂದಾಗುವ ಪರಿಣಾಮ ಮತ್ತು ಪ್ಲಾಸ್ಟಿಕ್‌ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಿದರೆ ಉತ್ತಮ ಪರಿಸರ ಮತ್ತು ಪ್ರಕೃತಿ ನಿರ್ಮಾಣ ಮಾಡಬಹುದು ಎಂದು ಹೇಳಿದರು.


ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಈಗಿರುವ ಭೂಮಿಯ ಫಲವತ್ತತೆ ಹೆಚ್ಚಬೇಕೆಂದರೆ ನಮ್ಮ ಸುತ್ತ್ತಲಿನ ಪರಿಸರ, ಪ್ರಕೃತಿ ಉತ್ತಮವಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಾಗುತ್ತಿರುವ ಹಾನಿಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಇದನ್ನು ತಪ್ಪಿಸಬೇಕೆಂದರೆ ಎಲ್ಲರೂ ಪರಿಸರ ಉಳಿಸಿ, ಬೆಳೆಸುವತ್ತ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ಪ್ರಕೃತಿ ಕಾಣಲು ಸಾಧ್ಯವಿಲ್ಲ ಎಂದರು.
ಪುರಸಭೆ ಸದಸ್ಯೆ ಸೌಮ್ಯಾ, ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್, ಹಸಿರು ಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷೆ ಸೌಭಾಗ್ಯಾ, ಕಾರ್ಯದರ್ಶಿ ನರಸಿಂಹಸ್ವಾಮಿ, ಜಿಲ್ಲಾ ಮುಖಂಡ ಆಂತೋಣಿ ಸ್ವಾಮಿ, ಗ್ರೀನರಿ ಟ್ರಸ್ಟ್ ಅಧ್ಯಕ್ಷ ಗಿರೀಶ್ ಇತರರಿದ್ದರು.