ಬೆಂಗಳೂರು : ನಗರದಲ್ಲಿ ಮೂಲಸೌಕರ್ಯ ಕಲ್ಪಿಸುವ ಸ್ಥಳದಲ್ಲಿ ದೊಡ್ಡ ಮರಗಳಿದ್ದರೆ, ಅವುಗಳನ್ನು ಕಡಿಯದೆ ಬೆಂಗಳೂರು ವಿಮಾನ ಸಂಸ್ಥೆ ನೆರವಿನೊಂದಿಗೆ ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್ತು (ಶಿವಾನಂದ ವೃತ್ತ) ಬಸ್ ನಿಲ್ದಾಣ ಹತ್ತಿರ ಬಿ.ಪ್ಯಾಕ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಐಎಎಲ್ ಬಳಿ ಮರಗಳನ್ನು ಸ್ಥಳಾಂತರಿಸುವ ದೊಡ್ಡ ಯಂತ್ರಗಳಿವೆ. ಅದರ ಸೇವೆ ಬಳಸಿಕೊಂಡು ಮರಗಳನ್ನು ಕಡಿಯದೆ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿನ ಮರಗಳನ್ನು ಸ್ಥಳಾಂತರಿಸಲು ಕ್ರಮವಹಿಸಲಾಗುವುದು ಎಂದರು.
ಮರಗಳ ಮೇಲೆ ಭಿತ್ತಿಪತ್ರ ಅಂಟಿಸಲು ಮೊಳೆ, ಸ್ಟೆಪ್ಲರ್ ಪಿನ್ ಹೊಡೆದಿದ್ದಾರೆ. ಜತೆಗೆ, ಮರಗಳಿಗೆ ಕೇಬಲ್‌ಗಳಿಂದ ಸುತ್ತಿದ್ದು, ಬೆಳವಣಿಗೆಗೆ ತೊಂದರೆಯಾಗಿದೆ. ಈ ಸಂಬಂಧ ಬಿ.ಪ್ಯಾಕ್ ಸಂಸ್ಥೆಯು ಮರಗಳಿಗೆ ಅಂಟಿಸಿರುವ ಭಿತ್ತಿಪತ್ರ, ಹೊಡೆದಿರುವ ಮೊಳೆ, ಸ್ಟೆಪ್ಲರ್ ಪಿನ್‌ಗಳನ್ನು ತೆಗೆಯಲು ಹಮ್ಮಿಕೊಂಡಿರುವ ಮೊಳೆಮುಕ್ತ ಮರ ಬೆಂಗಳೂರು ಅಭಿಯಾನ ಶ್ಲಾಘನೀಯವಾಗಿದೆ ಎಂದರು.
ಮರಕ್ಕೆ ಮೊಳೆ ಹೊಡೆದರೆ ಕ್ರಿಮಿನಲ್ ಕೇಸ್ : ಮರಕ್ಕೆ ಮೊಳೆ ಹೊಡೆಯುವುದು, ಕೇಬಲ್ ಅಥವಾ ತಂತಿಗಳನ್ನು ಸುತ್ತಿದರೆ ಸರಿಯಾಗಿ ನೀರು, ಪೌಷ್ಟಿಕಾಂಶ ಸಿಗದೆ ಮರಗಳು ಒಣಗುತ್ತವೆ. ಹೀಗಾಗಿ, ಮರಗಳ ಮೇಲೆ ಭಿತ್ತಿಪತ್ರ ಅಂಟಿಸುವುದು, ಮೊಳೆ ಹೊಡೆಯುವುದನ್ನು ನಿಷೇಧಿಸಲಾಗಿದ್ದು, ಪುನಃ ಮುಂದುವರಿಸಿದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ಮರಗಳಿಗೆ ಹಾನಿ ಮಾಡುವ, ಮೊಳೆ, ಪಿನ್ ಹೊಡೆಯುವ ಸಂಬಂಧ ಕಾನೂನಿನಲ್ಲಿ ತಿದ್ದುಪಡಿ ತಂದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.