ಜಿಲ್ಲೆ

ಮೈಸೂರಿನ ಹೈದರಾಲಿ ರಸ್ತೆಯಲ್ಲಿ ವೃಕ್ಷ ಕ್ರಾಂತಿ

ಆರ್.ಕೃಷ್ಣ

ಮೈಸೂರು: ರಾತ್ರೋರಾತ್ರಿ 40ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದ ನಗರದ ಹೈದರಾಲಿ ರಸ್ತೆಯಲ್ಲಿ ಮತ್ತೆ ಗಿಡಗಳನ್ನು ಬೆಳೆಸಲು ನಗರಪಾಲಿಕೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮುಂದಾಗಿದೆ.

ಎರಡು ತಿಂಗಳ ಹಿಂದೆ ಈ ರಸ್ತೆಯಲ್ಲಿ ಕಾಳಿಕಾಂಬ ದೇವಸ್ಥಾನದಿಂದ ಎಸ್‌ಪಿ ಕಚೇರಿ ವೃತ್ತದವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಲು ಏಕಾಏಕಿ ಮರಗಳನ್ನು ಕಡಿದಿದ್ದರಿಂದ ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಕರಣವನ್ನು ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಈಗ ಈ ರಸ್ತೆ ವಿಸ್ತರಣೆ ಬಳಿಕ ಮತ್ತೆ 40 ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ.

ರಸ್ತೆಯ ಎರಡೂ ಬದಿಯಲ್ಲಿ ಮರಗಳು ಕಾಣಸಿಗುವ ಕೆಲವೇ ಕೆಲವು ನಗರಗಳಲ್ಲಿ ಮೈಸೂರು ಒಂದು. ಹೈದರಾಲಿ ರಸ್ತೆಯಲ್ಲಿ ಉಂಟಾದ ಮರಗಳ ಹನನದ ಬಗ್ಗೆ ಬೇಸರವಿದೆ. ಇದೀಗ ರಸ್ತೆ ವಿಸ್ತರಣೆ ಮುಗಿದ ಮೇಲೆ 6 ರಿಂದ 8 ಅಡಿ ಇರುವ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನಗರಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ತಿಳಿಸಿದ್ದಾರೆ.

ಬೇಗ ಬೆಳೆಯುವ ಮರಗಳನ್ನು ನೆಟ್ಟರೆ ಐದು ವರ್ಷದಲ್ಲೇ ಅದು 12 ಅಡಿಯಷ್ಟು ಬೆಳೆಯುತ್ತದೆ. ಇದರಿಂದ ಹೈದರಾಲಿ ರಸ್ತೆ ಮೊದಲಿನಂತೆ ಆಗುತ್ತದೆ. ಹಸಿರು ಹೊದಿಕೆ ರಸ್ತೆಯ ಎರಡು ಬದಿಯಲ್ಲಿ ಕಾಣ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.